ಇಟಾಲಿಯನ್ ಸಾಹಿತ್ಯ
ಎಂದರೆ ಇಟಾಲಿಯನ್ ಭಾಷೆಯಲ್ಲಿ ರಚಿತವಾಗಿರುವ ಸಾಹಿತ್ಯ. ಪ್ರಾಚೀನ ರೋಮಿನ ಲ್ಯಾಟಿನ್ ಸಾಹಿತ್ಯವೂ ಒಂದು ರೀತಿಯಲ್ಲಿ ಇಟಲಿಯದೇ. ಆದರೆ ಅದನ್ನು ಇಟಲಿಯ ಸಾಹಿತ್ಯವೆಂದು ಪರಿಗಣಿಸುವುದು ವಾಡಿಕೆಯಾಗಿಲ್ಲ. ಲ್ಯಾಟಿನ್ ಸಾಹಿತ್ಯ ರೋಮನ್ ಸಾಮ್ರಾಜ್ಯದ ಪತನದೊಂದಿಗೆ ಕೊನೆಗೊಂಡಿತು. ಲ್ಯಾಟಿನ್ ಸಾಹಿತ್ಯ ಮಾತ್ರವೇ ಅಲ್ಲದೆ ಲ್ಯಾಟಿನ್ ಭಾಷೆಯ ಪ್ರಾಧಾನ್ಯವೂ ಕಡಿಮೆಯಾಗಿ ಆ ಭಾಷೆ-ನಮ್ಮ ದೇಶದಲ್ಲಿ ಪ್ರಾಕೃತ ಭಾಷೆಯಾದಂತೆ-ಬೇರೆ ಬೇರೆ ಉಪ ಭಾಷೆಗಳಾಗಿ ಒಡೆಯಿತು. ಲ್ಯಾಟಿನ್ ನಾಗರಿಕತೆಗೆ ಧಕ್ಕೆಯುಂಟುಮಾಡಿದ ಹೂಣರ ಆಕ್ರಮಣ ನಡೆದುದು ಕ್ರಿ.ಶ. ಐದನೆಯ ಶತಮಾನದ ಆದಿಭಾಗದಲ್ಲಿ. ಅಲ್ಲಿಂದ ಆರೇಳು ಶತಮಾನಗಳ ಕಾಲ ಇಟಾಲಿಯನ್ ಸಾಹಿತ್ಯದಲ್ಲಿ ಗಮನಾರ್ಹವಾದುದೇನೂ ಇರಲಿಲ್ಲ. ಆಗ ಸೃಷ್ಟಿಯಾದ ಸಾಹಿತ್ಯವೆನ್ನಬಹುದಾದ ಕೃತಿಗಳು ಕೆಲವು ಲ್ಯಾಟಿನ್ನಿನಲ್ಲೇ ಬಂದವು. ಇವುಗಳ ಮಧ್ಯೆ ಅಲ್ಲಲ್ಲಿ ಇಣಕಿ ನೋಡುವ ಇಟಾಲಿಯನ್ ಕೃತಿಗಳು ತೀರ ಕೆಳಮಟ್ಟದವು.

ಕ್ರಿ.ಶ. ಹದಿಮೂರನೆ ಶತಮಾನದಲ್ಲಿ ಫ್ರಾನ್ಸಿನ ಆಗ್ನೇಯ ಭಾಗದ ಪ್ರವೆನ್ಸ್ ಪ್ರಾಂತ್ಯದ ಕವಿಗಳನೇಕರು ಅಲ್ಲಿನ ಕ್ಷುಬ್ದ ವಾತಾವರಣದ ಪರಿಣಾಮವಾಗಿ ದೇಶ ತ್ಯಾಗಮಾಡಿ ಇಟಲಿಯ ದಕ್ಷಿಣಕ್ಕಿರುವ ಸಿಸಿಲಿ ದ್ವೀಪಕ್ಕೂ ಆ ದೇಶದ ಉತ್ತರದ ಕೆಲವು ಪ್ರದೇಶಗಳಿಗೂ ಬಂದು ನೆಲಸಿದರು. ಪ್ರಣಯ, ಯುದ್ಧ ಮತ್ತು ಸಾಹಸ ಕಾರ್ಯಗಳನ್ನು ಕುರಿತು ಕೃತಿ ರಚನೆಮಾಡುತ್ತಿದ್ದ ಈ ಕವಿಗಳು ಇಟಲಿಯವರಿಗೆ ಮಾದರಿಗಳಾದರು. ಮೊದಮೊದಲು ಪ್ರೂವೆಂಕಲ್ ಭಾಷೆಯಲ್ಲೂ ಇಟಾಲಿಯನ್ ಭಾಷೆಯಲ್ಲೂ ಅನುಕರಣಕಾರ್ಯ ನಡೆಯಿತು. ಸಿಸಿಲಿಯ ಎರಡನೆಯ ಫ್ರೆಡರಿಕ್‍ನ (1225-50) ಆಸ್ಥಾನದ ಕವಿಗಳು ಮೊಟ್ಟಮೊದಲು ಪ್ರೊವೆಂಕಲ್ ಮಾದರಿಯನ್ನು ಅನುಸರಿಸಿ ಇಟಾಲಿಯನ್ ಭಾಷೆಯಲ್ಲಿ ಕಾವ್ಯರಚನೆ ಮಾಡಿದರು. ಆಸ್ಥಾನಸಹಜವಾದ ಪ್ರಣಯ ಪ್ರಸಂಗಗಳೂ ಧರ್ಮಯುದ್ಧಗಳಿಗೆ (ಕ್ರೊಸೇಡ್ಸ್) ಸಂಬಂಧಪಟ್ಟ ಸಮರ ಪ್ರಸಂಗಗಳೂ ಇವರು ವರ್ಣಿಸಿದ ವಿಷಯಗಳು. ಸಿಸಿಲಿ ಗುಂಪು ಎಂದೇ ಇವರಿಗೆ ಹೆಸರು ಬಂದಿದೆ. ಜಕೊಪೊ ಡಲೆಂಟಿನೊ, ಅಪೂಲಿಯದ ಗಿಯೊಕೋಮಿನೊ, ರೈನಾಲ್ಡೊ ಡ ಅಕ್ವಿನೊ ಮತ್ತು ಎರಡನೆಯ ಫ್ರೆಡರಿಕ್-ಇವರು ಈ ಗುಂಪಿಗೆ ಸೇರಿದ ಪ್ರಮುಖರು. ಇವರ ಬರಹಗಳಲ್ಲಿ ಲ್ಯಾಟಿನ್ ಪದಪ್ರಯೋಗಗಳೂ ಪ್ರೊವೆಂಕಲ್ ಕಾವ್ಯದಿಂದ ತೆಗೆದುಕೊಂಡಿದ್ದ ಅಂಶಗಳೂ ಯಥೇಚ್ಛವಾಗಿದ್ದವು. ಆದರೂ ಒಟ್ಟಿನಮೇಲೆ ಅವು ಅಂದಿನ ಸಿಸಿಲಿ ಉಪಭಾಷೆಯಲ್ಲಿ ರಚಿತವಾದ ಕೃತಿಗಳು. ಇದೇ ಕಾಲದ ಉತ್ತರ ಇಟಲಿಯ ಕವಿಗಳು ಪ್ರೊವೆಂಕಲ್ ಕಾವ್ಯದ ವಸ್ತುಗಳನ್ನು ಅಷ್ಟಾಗಿ ಬಳಸದೆ, ನೀತಿಬೋಧನೆಗೇ ಪ್ರಾಶಸ್ತ್ಯ ಕೊಟ್ಟಿದ್ದರು. ಆದರೆ ಹದಿಮೂರನೆಯ ಶತಮಾನದಲ್ಲಿ ಫ್ರೆಂಚ್ ಮಹಾಕಾವ್ಯಗಳನ್ನು ಬಹಳವಾಗಿ ಅನುಕರಣೆಮಾಡಿ ಈ ಉತ್ತರ ಇಟಲಿಯ ಕವಿಗಳು ಆ ಜಾತಿಯ ಕೆಲವು ಕಾವ್ಯಗಳನ್ನು ರಚಿಸಿದರು. ಅವುಗಳ ಕಥೆಗಳು ಗದ್ಯದಲ್ಲೂ ನಿರೂಪಿತವಾದವು. ಇಂಥ ಕಥೆಗಳ ಬೃಹತ್ ಸಂಗ್ರಹವಾದ ರಿಯಲಿದ ಫ್ರಾನ್ಸಿಯ ಇಂದಿಗೂ ಇಟಲಿಯ ಜನಸಾಮಾನ್ಯರಿಗೆ ಪ್ರಿಯವಾಗಿದೆಯಂತೆ. ಮಧ್ಯ ಇಟಲಿಯಲ್ಲಿ ಅನುಕರಣಶೀಲವಲ್ಲದ ಸ್ವತಂತ್ರ ಸಾಹಿತ್ಯಪಂಥವೊಂದು ಆಸಾಸಿಯ ಸಂತ ಫ್ರಾನ್ಸಿಸನ ಪ್ರಭಾವದಿಂದ ಆರಂಭವಾಯಿತು. ಫ್ರಾನ್ಸಿಸನೇ ತನ್ನ ತಾಯ್ನುಡಿಯಾದ ಅಂಬ್ರಿಯಾ ಪ್ರಾಂತಭಾಷೆಯಲ್ಲಿ ಲಾಡಿಸ್ ಕ್ರೀಚುರೇರಮ್ ಎಂಬ ಗದ್ಯಕಾವ್ಯರೊಪದ ಕೃತಿಯನ್ನು ರಚಿಸಿದ. ದೇವರು ಸೃಷ್ಟಿಸಿರುವ ಎಲ್ಲ ಜೀವಿಗಳ ವಿಚಾರದಲ್ಲೂ ಅವನ ಹೃದಯದಲ್ಲಿ ಉಕ್ಕುತ್ತಿದ್ದ ಒಲವಿನ ನಿರರ್ಗಳ ಅಭಿವ್ಯಕ್ತಿ ಈ ಕೃತಿಗಳಲ್ಲಿದೆ. ಫ್ರಾನ್ಸಿನ ಆದರ್ಶವನ್ನು ಅನುಸರಿಸಿ ಅನೇಕರು ಮತಧರ್ಮಕ್ಕೆ ಸಂಬಂಧಪಟ್ಟ ಕಾವ್ಯ ಲೇಖನಗೈದರು. ಜಕಪೋನೆ ಡ ತೋಡಿ ಅವರಲ್ಲಿ ಹೆಸರಿಸಬೇಕಾದವ. ಆದರೆ ಸಂಪ್ರದಾಯಬದ್ಧ ಚರ್ಚಿನ ವಲಯಗಳಲ್ಲಿ ಈ ಕೃತಿಗಳಿಗೆ ಪ್ರೋತ್ಸಾಹ ಹಾಗಿರಲಿ, ಪ್ರವೇಶವೇ ದೊರೆಯಲಿಲ್ಲ.
ಹದಿಮೂರನೆಯ ಶತಮಾನದ ಮಧ್ಯಭಾಗದ ಅನಂತರ ಟಸ್ಕನಿ ಪ್ರಾಂತ್ಯದಲ್ಲಿ ತಲೆದೋರಿದ್ದ ಸಾಹಿತ್ಯ ಚಟುವಟಿಕೆಯೊಂದು ಪ್ರಭಾವಶಾಲಿಯಾಯಿತು. ಪ್ರೊವೆಂಕಲ್ ಸಾಹಿತ್ಯದಿಂದ ತೆಗೆದುಕೊಂಡಿದ್ದ ಸ್ತ್ರೀಗೌರವಮಯವಾದ ಪ್ರಣಯ ಸಂಪ್ರದಾಯದ ಜೊತೆಗೆ ಏಸು ಕ್ರಿಸ್ತನ ತಾಯಿ ಕನ್ಯೆ ಮೇರಿಯನ್ನು ದೇವಿಯೆಂದು ಆರಾಧಿಸುವ ಪದ್ಧತಿಯೂ ಸೇರಿ ಈ ಹೊಸಕಾವ್ಯ ಪಂಥ ಮೂಡಿತು. ಹೆಣ್ಣಿನ ಒಲುಮೆಗಾಗಿ ಹೃದಯ ಹಾತೊರೆದಾಗ ಅದರಿಂದುಂಟಾಗುವ ನೋವು ನಲಿವುಗಳ ಅನುಭವದೊಡನೆ ಮಾನವ ದೇವರ ಪ್ರೇಮಕ್ಕೆ ಆಸೆಪಡುವುದೂ ಸೇರಿ ಹೊಸಬಗೆಯ ಮನೋಧರ್ಮ ಬೆಳೆಯುತ್ತದೆ. ಗಂಡು ಹೆಣ್ಣುಗಳ ಸಂಬಂಧ ಮನುಷ್ಯ-ದೇವರ ಸಂಬಂಧವಾಗಿ ಪರಿವರ್ತಿತವಾಗುತ್ತದೆ. (ಭಾರತೀಯ ಭಕ್ತಿಪಂಥದವರ ಅನುಭಾವೀ ಕವಿತೆಗಳಲ್ಲಿರುವಂತೆ). ಈ ವಸ್ತುವಿಗೆ ಅನುಗುಣವಾದ ಸುಮಧುರ ಶೈಲಿಯೂ ಕವನಗಳಲ್ಲುಂಟು. ಈ ಶೈಲಿಗೆ ಮಧುರನವಶೈಲಿ (ಡಲ್ಸಿಸ್ಟಿಲ್ ನ್ಯೂವೊ) ಎಂದೇ ಹೆಸರು ಬಂದಿದೆ. ಈ ಶೈಲಿಯನ್ನು ಬಳಸಿದವರಲ್ಲಿ ಮೊದಲು ಪ್ರಸಿದ್ಧಿಗೆ ಬಂದವ ಬೊಲೋನಾ ನಗರದ ಗೀಡೊ ಗಿನಿಜೆಲ್ಲಿ ಈ1240-46). ಅದುವರೆಗೂ ಇಟಾಲಿಯನ್ ಭಾಷೆಯಲ್ಲಿ ಕಾವ್ಯ ರಚನೆ ಮಾಡಿದ್ದವರೆಲ್ಲ ಅವನೇ ಅತ್ಯಂತ ಗಣ್ಯನಾದವ. ತತ್ಕಾರಣ ಅವರ ಲೇಖನ ರೀತಿಯನ್ನು ಅನುಸರಿಸಿದ ಅಲಿಘೀರಿ ಡ್ಯಾಂಟೆ, ಗೀಡೊ ಕವ್ಯಲ್ಕಂಟಿ, ಡಿನೊ ಕ್ರಿಸ್ಕೊ ಬಾಲ್ಡಿ, ಸಿನೋ ಡ ಪಿಸ್ಟೋಯಿಯ ಮತ್ತು ಲ್ಯಾಪೂ ಗಿಯಾನಿ-ಇವರು ಈ ಫ್ಲಾರೆನ್ಸ್ ಗುಂಪಿನ ಪ್ರಮುಖರಾದರು. ಇವರೆಲ್ಲರ ಕವನಗಳಲ್ಲೂ ಪ್ರಣಯ ಮತ್ತು ಮತನಿಷ್ಠೆಗಳ ಸಂಯೋಗ ಕಂಡುಬರುತ್ತದೆ. ಡಾಂಟೆಯ ಡಿವೈನ್ ಕಾಮೆಡಿ ಎಂಬ ಮಹಾ ಕಾವ್ಯವಂತೂ ಈ ಕಾವ್ಯವರ್ಗಕ್ಕೆ ಕಲಶದಂತಿದೆ. ಅದೊಂದು ಅನುಪಮ ರೂಪಕ ಕಾವ್ಯವೂ ಆಗಿದೆ. 
ಹದಿಮೂರನೆ ಶತಮಾನದ ಇಟಾಲಿಯನ್ ಗದ್ಯಸಾಹಿತ್ಯ ಮುಖ್ಯವಾಗಿ ಐತಿಹ್ಯಗಳು, ಮೊದಲಾದ ಕಥೆಗಳ ಸಂಗ್ರಹಗಳಿಂದ ಕೂಡಿತ್ತು. ಇವುಗಳಲ್ಲಿ ನಾವೆಲಿನೂ ಮತ್ತು ಲಿಬ್ರೊಡಿಸೇವಿ (ಸತ್ತ ಸಂತರ ಪುಸ್ತಕ) ಹೆಸರಿಸಬೇಕಾದವು. ಇವಲ್ಲದೆ, ಲ್ಯಾಟಿನ್ ಮತ್ತು ಫ್ರೆಂಚ್ ಗ್ರಂಥಗಳ ಭಾಷಾಂತರಗಳೂ ಹಲವು ಬಂದವು. ಡಿನೊ ಕ್ಯಾಂಪಾನಿ ಎಂಬುವನ ಕ್ರೋನಾಕ ಎಂಬುದು ಚರಿತ್ರೆಯ ಗ್ರಂಥ. ಪ್ರವಾಸಿ ಮಾರ್ಕೊ ಪೋಲೋನ ವಿಯಾಗಿ ಎಂಬ ಅವನ ದೇಶಸಂಚಾರದ ವರ್ಣನೆಗಳ ಗ್ರಂಥ ಇಂದೂ ಖ್ಯಾತಿ ಪಡೆದಿದೆ.

ಹದಿನಾಲ್ಕನೆಯ ಶತಮಾನದಲ್ಲಿ ಟಸ್ಕನಿ ಪ್ರಾಂತ್ಯ ಇಟಾಲಿಯನ್ ಸಾಹಿತ್ಯ ಕೇಂದ್ರವಾಯಿತು. ತತ್ಫಲವಾಗಿ ಆ ಪ್ರಾಂತ್ಯದ ಭಾಷೆ ಮುಖ್ಯವೂ ಎಲ್ಲೆಡೆ ಪುರಸ್ಕøತವೂ ಆದ ಸಾಹಿತ್ಯ ಮಾಧ್ಯಮವಾಯಿತು. ಗದ್ಯ ಪದ್ಯಗಳೆರಡರಲ್ಲೂ ಟಸ್ಕನಿ ಭಾಷೆ ಇತರ ಪ್ರಾಂತ್ಯಭಾಷೆಗಳನ್ನು ಮೀರಿಸಿತು. ಆ ಭಾಷೆ ಪ್ರಾಮುಖ್ಯಕ್ಕೆ ಬಂದ ಕಾರಣಗಳಲ್ಲಿ ಫ್ಲಾರೆನ್ಸ್ ನಗರ ವ್ಯಾಪಾರಕೇಂದ್ರವಾದುದೂ ಒಂದು. ಮಧ್ಯಯುಗದ ಇಟಾಲಿಯನ್ ಸಾಹಿತ್ಯದ ರತ್ನತ್ರಯರಾದ ಡಾಂಟೆ, ಪೆಟ್ರಾರ್ಕ್, ಬೊಕ್ಯಾಚಿಯೊಗಳು ಆ ಭಾಷೆಯಲ್ಲಿ ಕೃತಿರಚನೆ ಮಾಡಿದ್ದು ಇವೆಲ್ಲಕ್ಕಿಂತಲೂ ದೊಡ್ಡ ಕಾರಣ.
ಪೆಟ್ರಾರ್ಕ್ ಅದುವರೆಗೂ ಕವಿಜನಪ್ರಿಯವಾಗಿದ್ದ ಅನುಭಾವೀ ಶೈಲಿಯ ಕಾವ್ಯವನ್ನು ಬಿಟ್ಟು ವಾಸ್ತವತೆಗೂ ಹೆಂಗಸಿನ ಶಾರೀರಿಕ ರೂಪ ಲಕ್ಷಣಗಳಿಗೂ ಹೆಚ್ಚಿನ ಗಮನ ಕೊಟ್ಟ. ಹಾಗೆಯೇ ಪ್ರಣಯಿಗಳ ಮನೋವಿಶ್ಲೇಷಣೆಯೂ ಅವನ ಪ್ರಣಯ ಕವನಗಳ ವೈಶಿಷ್ಟ್ಯವಾಯಿತು. ಈ ಬದಲಾವಣೆಯ ಪರಿಣಾಮವಾಗಿ ಅದುವರೆಗೂ ಇಟಲಿಯ ಕವಿಗಳಿಗೆ ಮಾರ್ಗದರ್ಶಕನಾಗಿದ್ದ ಡಾಂಟೆಯ ಸ್ಥಾನ ಪೆಟ್ರಾರ್ಕನಿಗೆ ಲಭಿಸಿತು. ಬೊಕ್ಯಾಚಿಯೊ ಈ ಯುಗದ ಅತ್ಯಂತ ಗಣನೀಯನಾದ ಗದ್ಯಲೇಖಕ. ಅವನ ಗದ್ಯ ಉದ್ದುದ್ದನೆಯ ವಾಕ್ಯಗಳಿಂದ ತುಂಬಿ ನಮಗೆ ಇಂದು ಭಾರವಾಗಿ ಕಂಡರೂ ಅವನ ಕಾಲದಲ್ಲಿ ಅದಕ್ಕೆ ಗೌರವವಿತ್ತು. ಅಂತೆಯೇ ಅನೇಕರು ಬೊಕ್ಯಾಚಿಯೊನ ಅನುಯಾಯಿಗಳಾದರು. ಅವನ ಕೃತಿ ಡೆಕಮೆರಾನ್ ಒಂದುನೂರು ಕಥೆಗಳ ಸಂಕಲನ.
ಹದಿನೈದನೆಯ ಶತಮಾನದ ಪೂವಾರ್ಧದಲ್ಲಿ ಇಟಾಲಿಯನ್ ಭಾಷೆಯಲ್ಲಿ ದೊಡ್ಡ ಕೃತಿಗಳೇನೂ ಬರಲಿಲ್ಲ. ಪ್ರತಿಭಾವಂತರು ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಗ್ರಂಥ ವ್ಯಾಸಂಗದಲ್ಲಿ ತೊಡಗಿ ಹಿಂದಿನ ಸಂಸ್ಕøತಿಯನ್ನು ಆಧುನಿಕ ವಾತಾವರಣಕ್ಕೆ ಹೊಂದಿಸಿ ಬೆಳೆಸುತ್ತಿದ್ದುದೇ ಇದಕ್ಕೆ ಕಾರಣ. ಸಾಂಸ್ಕøತಿಕ ನವೋದಯವೂ (ರಿನೇಸನ್ಸ್) ಈ ಪ್ರವೃತ್ತಿಗೊಂದು ಪ್ರೋತ್ಸಾಹ ಕೊಟ್ಟಿತು. ಬರೆಯಬಲ್ಲವರಾಗಿದ್ದವರು ದೇಶಭಾಷೆ ಇಟಾಲಿಯನ್ನನ್ನು ಬಿಟ್ಟು ಲ್ಯಾಟಿನ್ನಿಗೆ ಮಾರುಹೋಗಿದ್ದರು. ಅವರು ಜ್ಞಾನ ಸಂಪಾದನೆ, ಶಾಸ್ತ್ರಪಠನೆ ಮೊದಲಾದ ಚಟುವಟಿಕೆಗಳಲ್ಲಿ ಕಾಲಕಳೆಯುತ್ತಿದ್ದುದರಿಂದ ಕಾವ್ಯರಚನೆ ನಿರ್ಲಕ್ಷ್ಯಕ್ಕೆ ಗುರಿಯಾಯಿತೆನ್ನಬಹುದು. ಫ್ಲಾರೆನ್ಸಿನ ಮೆಡಿಚಿ ವಂಶದವರ-ಅದರಲ್ಲೂ ಲೊರೆಂಜೋನ-ಪ್ರಭಾವ ಮತ್ತು ಪ್ರೋತ್ಸಾಹಗಳ ಪರಿಣಾಮವಾಗಿ ಇಟಲಿಯಲ್ಲಿ ಹೊಸ ಸಾಹಿತ್ಯವೇ ಸೃಷ್ಟಿಯಾಗತೊಡಗಿತು. ಅವನ ಆಶ್ರಯ ಪಡೆದ ಕವಿಗಳೂ ಇತರ ಲೇಖಕರೂ ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದಲ್ಲೂ ತತ್ತ್ವಶಾಸ್ತ್ರದಲ್ಲೂ ಇತರ ಜ್ಞಾನಕ್ಷೇತ್ರಗಳಲ್ಲೂ ತಾವು ಕಂಡು ಮೆಚ್ಚಿಕೊಂಡಿದ್ದ ಶ್ರೇಷ್ಠ ಲಕ್ಷಣಗಳನ್ನು ಸದುಪಯೋಗಪಡಿಸಿಕೊಂಡು ಹೊಸ ಸಾಹಿತ್ಯವನ್ನು ರಚಿಸಿದರು. ಇಟಾಲಿಯನ್ ಭಾಷೆಯನ್ನು ಈ ಸಾಹಿತ್ಯಕ್ಕೆ ಯೋಗ್ಯ ಮಾಧ್ಯಮವಾಗಿ ರೂಪಿಸುವ ಕಾರ್ಯವನ್ನು ಅವರು ಯಶಸ್ವಿಯಾಗಿ ನೆರವೇರಿಸಿದರು. ಫ್ಲಾರೆನ್ಸ್ ನಗರದ ಜೊತೆಗೆ ಅರ್ಬಿನೊಫೆರಾರ, ಮಾಂಟುವಾ ಮೊದಲಾದ ಇತರ ಪ್ರಮುಖ ಇಟಾಲಿಯನ್ ನಗರಗಳ ನಾಗರೀಕ ಜೀವನವೂ ಶ್ರೀಮಂತರ ಪ್ರೋತ್ಸಾಹವೂ ಈ ನೂತನ ಸಾಹಿತ್ಯ ಮಾರ್ಗದ ಬೆಳೆವಣಿಗೆಗೆ ಅಗತ್ಯವಾಗಿದ್ದ ಪೋಷಣೆಯನ್ನೂ ಮನ್ನಣೆಯನ್ನೂ ಒದಗಿಸಿದವು.
ಹೀಗೆ ರಚಿತವಾದ ಹೊಸ ಸಾಹಿತ್ಯಕ್ಕೆ ದೀವಿಗೆಗಳಂತಿರುವ ಎರಡು ಕೃತಿಗಳು ಮ್ಯಾಟಿಯೋ ಮೋರಿಯಾ ಬಯಾರ್ಡೊನ ಆರ್ಲಾಂಡೋ ಇನ್ಯಾಮೊರ್ಯಾಟೊ (ಪ್ರಣಯಿ ಆರ್ಲಾಂಡೊ) ಮತ್ತು ಅರಿಯೋಸ್ಟೊ ಲುಡೋವಿಕೊನ ಆರ್ಲಾಂಡೊ ಪ್ಯೂರಿಯೋಸೊ (ಉನ್ಮತ್ತ ಆರ್ಲಾಂಡೊ) ಇವೆರಡೂ ಮಹಾ ಕಾವ್ಯಗಳ ವರ್ಗಕ್ಕೆ ಸೇರಿದ ಮೇಲ್ಮಟ್ಟದ ಕೃತಿಗಳು. (ಮೊದಲನೆಯದು ಅಸಂಪೂರ್ಣವಾಗಿದ್ದರೂ ಈ ಪ್ರಶಂಸೆಗೆ ತಕ್ಕುದಾಗಿದೆ.) ಆರ್ಲಾಂಡೊ ಫ್ರೆಂಚ್ ವೀರ ಚಾರ್ಲ್‍ಮೇನನ ಅನುಚರರಲ್ಲಿ ಪ್ರಸಿದ್ಧನಾಗಿದ್ದು ಎಷ್ಟೋ ಕಥೆ ಕವನಗಳ ನಾಯಕನಾಗಿ ಜನಪ್ರಿಯನಾಗಿದ್ದವ. ಫ್ರಾನ್ಸಿನ ಚಾರ್ಲ್‍ಮೇನ್ ಮತ್ತು ಆರ್ಲಾಂಡೊ, ಇಂಗ್ಲೆಂಡಿನ ಆರ್ಥರ್ ಇವರಿಗೆ ಸಂಬಂಧಿಸಿದ ಕಥೆಗಳ ಆದಾರದ ಮೇಲೆ ರಚಿತವಾದ ಈ ಕಾವ್ಯಗಳು ಇಂಥ ಇತರ ಕಾವ್ಯಗಳಿಗೆ ಮಾದರಿಗಳಾದವು. ಶೃಂಗಾರರಸ, ವೀರರಸಗಳ ಮಿಶ್ರಣ ಇವುಗಳಲ್ಲಿ ಕಂಡುಬರುತ್ತದೆ. ನಿರೂಪಣೆ ಆಕರ್ಷಕ ಶೈಲಿ ಮತ್ತು ಭಾಷಾಪ್ರಯೋಗಗಳಿಂದ ಇವು ಶೋಭಿಸುತ್ತಿವೆ. ಈ ಯುಗದ ಕಾವ್ಯಗಳಲ್ಲಿ ಬೇರೆ ವಿಷಯಗಳಿರಲೇ ಇಲ್ಲವೆಂದಲ್ಲ. ಧಾರ್ಮಿಕ ವಿಷಯಗಳನ್ನು ಕಾವ್ಯದಲ್ಲೇ ನಿರೂಪಿಸುವ ಪದ್ಧತಿ ಮುಂದುವರಿಯಿತು. ಕ್ರಿಸ್ತನ ಜೀವನವನ್ನೂ ಇತರ ಬೈಬಲ್ ಕಥೆಗಳನ್ನೂ ತೋರಿಸುವ ನಾಟಕಗಳು ಬಂದವು. ಬಾಲ್ಡಸರ್ ಕ್ಯಾಸ್ಟಿಲಿಯೋನಿ ಎಂಬ ಲೇಖಕ ಈ ತರದ ಕೃತಿಗಳಿಗೆ ಹೆಸರಾದವ.
ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಇಟಲಿ ಫ್ರಾನ್ಸಿನ ಆಕ್ರಮಣಕ್ಕೆ ಗುರಿಯಾಯಿತು. ತತ್ಪಲವಾಗಿ ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಶಾಂತ ವಾತಾವರಣ ಕಲಕಿಹೋಯಿತು. ಕ್ಷೋಭೆ ಇಟಲಿಯನ್ನು ಆವರಿಸಿ ಭದ್ರತೆ ಶಾಂತಿಗಳಿಲ್ಲವಾದವು. ರಾಜಕೀಯ ಜೀವನ ಕಷ್ಟಕರವೂ ಅತಿ ಸೂಕ್ಷ್ಮವೂ ಆಯಿತು. ಈ ಪರಿಸ್ಥಿತಿಯಲ್ಲಿ ಮೂಡಿಬಂದ ಕೃತಿ ಕ್ಯಾಸ್ಟಿಲಿಯೋನನ ಕಾರ್ಟಿಜಿಯೋನಿ (ಆಸ್ಥಾನಿಕನ ಪುಸ್ತಕ; 1506) ಎಂಬ ಗ್ರಂಥ. ಶ್ರೀಮಂತ ಜೀವನ ಹೇಗಿರಬೇಕು ಎಂದು ತಿಳಿಸುವುದೇ ಈ ಲೇಖಕನ ಉದ್ದೇಶ. ಮ್ಯಾಕಿಯವೆಲಿಯ ಇಲ್‍ಪ್ರಿನ್ಸಿಪೆಸ್ (ರಾಜಕುಮಾರ) ಎಂಬ ರಾಜನೀತಿ ಬೋಧಕ ಗ್ರಂಥವೂ ಹೆಚ್ಚು ಕಡಿಮೆ ಈ ಕಾಲದ್ದೇ. ಈ ಪುಸ್ತಕಗಳು ಅಂದಿನ ಇಟಲಿಯ ರಾಜಕೀಯ ಪರಿಸ್ಥಿತಿಯ ಅನಿಶ್ಚಿತತೆಯನ್ನೂ ಎಲ್ಲೆಲ್ಲೂ ತಾಂಡವವಾಡುತ್ತಿದ್ದ ಅಭದ್ರತೆಯನ್ನೂ ನಿರಂತರ ಜಾಗೃತಿಯ ಅಗತ್ಯವನ್ನೂ ಎತ್ತಿತೋರಿಸುತ್ತವೆ. ಅವುಗಳ ಶೈಲಿ ಇಟಾಲಿಯನ್ ಭಾಷೆಯಲ್ಲಿ ಗದ್ಯ ಗ್ರಂಥಗಳ ಮತ್ತು ರಾಜನೀತಿ, ಇತಿಹಾಸ ಮೊದಲಾದ ವಿಷಯಗಳನ್ನು ಕುರಿತು ರಚಿತವಾದ ಗ್ರಂಥಗಳ ಬರಹಕ್ಕೆ ಮಾರ್ಗದರ್ಶಕವಾಯಿತು.

ಇದೇ ಕಾಲದಲ್ಲಿ ಶ್ರೀಮಂತವರ್ಗಕ್ಕೂ ಜನಸಾಮಾನ್ಯರಿಗೂ ಇದ್ದ ಸಂಪರ್ಕ ಕಡಿಮೆಯಾಗಿ ಅದಕ್ಕೆ ತಕ್ಕಂತೆ ಸಾಹಿತ್ಯದಲ್ಲೂ ಎರಡು ಬಗೆಯ ಭಾಷಾಶೈಲಿಗಳು ಬರಲಾರಂಭಿಸಿದವು. ಒಂದು-ಲ್ಯಾಟಿನ್ ಶೈಲಿಯ ಧಾಟಿ ಮತ್ತು ಪದಪ್ರಯೋಗದಿಂದ ಕೂಡಿದ್ದು, ಇನ್ನೊಂದು-ಸರಳವಾದ ಇಟಾಲಿಯನ್ ಪದಗಳಿಂದ ಕೂಡಿದ್ದು. ಎರಡನೆ ಪಂಥ ಕ್ರಮೇಣ ಪ್ರಬಲವಾಗಿ ಭಾಷಾಪ್ರಶ್ನೆ (ಕ್ವೆಶ್ಚನ್ ಡೆಲ್ಲಲಿಂಗ್ವ) ಎಂಬ ಸಮಸ್ಯೆಯೇ ಎದ್ದಿತು. ಬರವಣಿಗೆಯಲ್ಲಿ ಇಟಾಲಿಯನ್ ಪದಗಳನ್ನೇ ಬಳಸಬೇಕೆಂದೂ ಲ್ಯಾಟಿನ್ ಶೈಲಿಯ ಅಥವಾ ಪದಗಳ ಪ್ರಾಬಲ್ಯವನ್ನು ಕಡಿಮೆ ಮಾಡಬೇಕೆಂದೂ ಹೇಳುವ ವೀರದೇಶೀ ಪಂಗಡವೊಂದು ಎದ್ದಿತು. ಈ ವಾಗ್ವಾದದ ಪರಿಣಾಮವಾಗಿ ಭಾಷಾಪ್ರಯೋಗ ಪದಪ್ರಯೋಗ, ಶೈಲಿ, ಮೊದಲಾದ ಪ್ರಶ್ನೆಗಳನ್ನು ಕುರಿತು ಹಲವು ಚರ್ಚಾತ್ಮಕ ಲೇಖನಗಳು ಹೊರಬಿದ್ದವು. ಅವುಗಳಲ್ಲಿ ಇಂದಿಗೂ ವಿಮರ್ಶಕರ ಗಮನಕ್ಕೆ ಅರ್ಹವಾಗಿರುವುದು ಡಾಂಟೆಯ ಡಿ ವಲ್ಗರೈ ಎಲೋಕ್ವೆನ್ಷಿಯಾ ಎಂಬ ಪ್ರಬಂಧ. ಲ್ಯಾಟಿನ್ ಪದಗಳಿಗೆ ಬದಲಾಗಿ ಇಟಾಲಿಯನ್ ಭಾಷೆಯ ಹಳೆಯ ಪದಗಳನ್ನೇ ಬಳಸಬೇಕೆಂಬ ಅಭಿಪ್ರಾಯವನ್ನು ಎತ್ತಿ ಹಿಡಿದ ಅಕೆಡಮಿಯ ಡೆಲ್ಲಕ್ರಸ್ಕ ಎಂಬ ಒಂದು ಸಂಸ್ಥೆಯೇ ಹೆಸರುವಾಸಿಯಾಗಿದೆ. ಆದರೆ ಇದಕ್ಕೆ ವಿರುದ್ಧವಾದ ಮತವುಳ್ಳವರೂ ಇದ್ದರು. ಅತಿಯನ್ನು ವರ್ಜಿಸಿ ಎರಡರ ಮಿಶ್ರಣವಾದ ಭಾಷೆಯನ್ನು ಬಳಸಬೇಕೆನ್ನುವವರಿಗೂ ಕೊರತೆಯಿರಲಿಲ್ಲ. ಡಾಂಟೆ ಇವರಲ್ಲೊಬ್ಬ. ಈ ಎರಡು ಬಗೆಯ ಶೈಲಿಗಳನ್ನೂ ಗದ್ಯಪದ್ಯಗಳೆರಡೂ ರಚಿತವಾದವು. ಪದ್ಯ ಬಹುಮಟ್ಟಿಗೆ ಭಾವಗೀತೆಗಳ ರೂಪವನ್ನು ತಳೆಯಿತು. ಭಾವಗೀತೆಗಳ ಲೇಖಕರಲ್ಲಿ ಫ್ಲಾರೆನ್ಸ್ ಮೇರೀಯ ಮೋಲ್ಜಾ, ಬರ್ನಾರ್ಡೊ ರೋಟಾ, ವಾರೊನಿಕೊ ಗಾಂಬಾರ, ಗಿಯೊದಾನಿ ಡೆಲ್ಲ ಕ್ಯಾಸ ಮೊದಲಾದವರೂ ಗದ್ಯಲೇಖಕರಲ್ಲಿ ಬೇಯೊ, ಫ್ಯೋಯೋ, ಮ್ಯಾಕಿಯವೆಲಿ ಮೊದಲಾದ ಚರಿತ್ರಕಾರರೂ ಜಾರ್ಜಯಾ ವೆಸರಿ ಮೊದಲಾದ ಜೀವನ ಚರಿತ್ರೆಗಳ ಲೇಖಕರೂ ಬಂಡೆಲೊ ಗ್ರಾಜಿನಿ, ಸ್ಟ್ರಪರೋಲ, ಸಿಂಜಿಯೊ ಲಿಗಿಡ ಪೋರ್ನೊ, ಮೊದಲಾದ ನಾವೆಲಾ ಕರ್ತೃಗಳೂ ಇದ್ದರು. ಈ ನಾವೆಲಾಗಳ ಕಥೆಗಳಲ್ಲಿ ಕೆಲವು ಷೇಕ್ಸ್‍ಪಿಯರನ ನಾಟಕಗಳಿಗೆ ವಸ್ತುಗಳನ್ನು ಒದಗಿಸಿದವು.

ನಾಟಕದ ಅಂದಿನ ಸಾಹಿತ್ಯವಿಮರ್ಶೆಯ ತತ್ತ್ವಕ್ಕೆ ಅನುಸಾರವಾಗಿ ದುರಂತ ನಾಟಕ, ಹಾಸ್ಯ ನಾಟಕಗಳೆಂದು ಎರಡು ನಿರ್ದಿಷ್ಟ ವರ್ಗಗಳು ತಲೆದೋರಿದವು. ರಿನೇಸನ್ಸ್ ಕಾಲದಲ್ಲಿ ಗ್ರೀಕ್ ಮತ್ತು ರೋಮನ್ ನಾಟಕಗಳ ಪ್ರಭಾವದ ಜೊತೆಗೆ ಅರಿಸ್ಟಾಟಲ್ ಮತ್ತು ಹೊರೇಸರ ವಿಮರ್ಶೆಯ ಪ್ರಭಾವವೂ ಇದಕ್ಕೆ ಕಾರಣವಾಗಿತ್ತು. ಕ್ರಿಯೈಕ್ಯ, ಕಾಲೈಕ್ಯ, ಸ್ಥಳೈಕ್ಯಗಳು ಮೊದಲಾದವುಗಳ ಬಗ್ಗೆ ಅರಿಸ್ಟಾಟಲನ ಅಭಿಪ್ರಾಯಗಳನ್ನು ಕಲೆಗಾರರು ಒಪ್ಪಿಕೊಂಡು ಅವುಗಳ ಪ್ರಕಾರ ಕೃತಿ ರಚನೆ ಮಾಡಿದರು. ಆದರೆ ಅವರು ಅರಿಸ್ಟಾಟಲನ ಭಾವವಿರೇಚನಕ್ಕೆ ಬದಲಾಗಿ ಮೆಚ್ಚಿಕೆಯ ಗುರಿಯನ್ನು ಎತ್ತಿಹಿಡಿದರು. ಕಥಾನಾಯಕನ ಕಷ್ಟಸಹಿಷ್ಣುತೆಯನ್ನು ಕಂಡು ಪ್ರೇಕ್ಷಕರು ಅಯ್ಯೋ ಎನ್ನಬೇಕಾದುದಿಲ್ಲ, ಮೆಚ್ಚಬೇಕು ಎಂಬುದೇ ಈ ತತ್ತ್ವ. ಮಹಾಕಾವ್ಯದ ನಾಯಕರ ವಿಚಾರದಲ್ಲಿ ನಮ್ಮಲ್ಲಿ ಉಂಟಾಗುವ ಪ್ರತಿಕ್ರಿಯೆಯೇ ದುರಂತನಾಟಕಗಳ ನಾಯಕರ ವಿಚಾರದಲ್ಲೂ ಆಗಬೇಕೆಂಬುದು ಅವರ ಆಶಯವಾಗಿತ್ತು. ಹದಿನಾರನೆಯ ಶತಮಾನದ ಹಾಸ್ಯ ನಾಟಕಗಳು ಕ್ಲಾಸಿಕಲ್ (ಎಂದರೆ ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್) ನಾಟಕಗಳ ಮಾದರಿಗಳನ್ನು ಅನುಸರಿಸಿದವು. ದುರಂತ ನಾಟಕಕಾರರಲ್ಲಿ ಟ್ರೆಸಿನೊ, ರೊಸೆಲೆ, ಅರೇಟೇನೋ ಮೊದಲಾದವರೂ ಇದ್ದರು. ಈ ಎರಡು ವರ್ಗಗಳಲ್ಲೂ ಕ್ಲಾಸಿಕಲ್ ಮಾದರಿಗಳ ಅನುಕರಣೆ ಬಹಳವಾಗಿತ್ತು. ಕ್ಲಾಸಿಕಲ್ ಪಂಥಕ್ಕೆ ಸೇರದ ನಾಟಕಗಳೂ ಹೆಚ್ಚಿನ ಸೃಜನಶಕ್ತಿಯನ್ನೂ ವಾಕ್‍ಕೌಶಲವನ್ನೂ ವಿಷಯವೈವಿಧ್ಯ, ರಚನಾವೈವಿಧ್ಯಗಳನ್ನೂ ತೋರಿಸುತ್ತವೆ. ಗೊಲ್ಲಜೀವನವನ್ನು ಚಿತ್ರಿಸುವ ನಾಟಕಗಳೂ ರಚಿತವಾದವು. ಅಗೊಸ್ಟಿನೊ ಬೆಕಾರಿ, ಟಾಕ್ಕಾಟೊ ಟ್ಯಾಸೊ, ಗ್ವರನಿ ಮೊದಲಾದವರು ಈ ಕ್ಷೇತ್ರದಲ್ಲಿ ಪ್ರಮುಖರು. ಇವುಗಳ ಜೊತೆಗೆ ಪ್ರಹಸನಗಳು ರಚಿತವಾದವು. ಸನಜಾರೊ, ಗಿಯೋವಾನಿ ಗಿಯಾರ್ಜಿಯೊ, ಏಂಜೆಲೊ ಬಿಯೋಲ್ಕೊ, ಆಂಡ್ರಿಯಾ ಕಾಲ್ಮೊ ಈ ತೆರದ ನಾಟಕಗಳ ರಚನೆಯಲ್ಲಿ ಹೆಸರು ಪಡೆದರು. ಆಧುನಿಕ ಯೂರೋಪಿನ ಸಾಹಿತ್ಯದಲ್ಲಿ ಈ ಪ್ರಾಚೀನ ಕಲಾಪ್ರಭೇದಗಳ ರಚನೆಯಲ್ಲಿ ಮೊದಲು ಪ್ರಯೋಗ ನಡೆದುದು ಇಟಲಿಯನ್ ಭಾಷೆಯಲ್ಲೇ.
ಈ ಕಾಲದಲ್ಲೇ ಕಥನಕಾವ್ಯಗಳೂ ಹೊರಬಿದ್ದವು. ಅರಿಯೋಸ್ಟೊನ ಆರ್ಲಾಂಡೂ ಪ್ಯೂರಿಯೋಸೂ ಕಾವ್ಯವನ್ನು ಮಾದರಿಯಾಗಿಟ್ಟುಕೊಂಡು ಬರ್ನಾರ್ಡೊ ಟ್ಯಾಸೂ (1493-1568) ಜೆರೊಸಲೆಮ್ ಲಿಬರೇಟಾ ಕಾವ್ಯವನ್ನು ರಚಿಸಿದ. ಅರಿಯೋಸ್ಟೊನ ಕಾವ್ಯದಂತೆಯೇ ಇದೂ ಒಂದು ಅದ್ಭುತ ಕಥೆಯ ನಿರೂಪಣೆಯಾದರೂ ಹದಿನಾರನೆ ಶತಮಾನದಲ್ಲಿ ಕ್ರೈಸ್ತಮತದಲ್ಲಿ ನಡೆದ ಪ್ರಾಟೆಸ್ಟಂಟ್ ಸುಧಾರಣೆಯ ಪ್ರಭಾವಗಳನ್ನೂ ಒಳಗೊಂಡಿದೆ. ಇಂಥ ಅದ್ಭುತ ಭವ್ಯ ಕಾವ್ಯಗಳನ್ನೂ ಅಣಕವಾಡುವ ಪಿಯತ್ರೊ ಅರೇಟೇನೋನ ಆರ್ಲಾಂಡಿನೊ (ಪುಟ್ಟ ಆರ್ಲಾಂಡೂ) ಎಂಬ ಕವನವೂ ಈಗಲೆ ರಚಿತವಾದುದು ಗಮನಾರ್ಹ. ಈ ಎಲ್ಲ ಕ್ಷೇತ್ರಗಳಲ್ಲೂ ಇಟಾಲಿಯನ್ ಸಾಹಿತ್ಯ ಯೂರೋಪಿನ ಇತರ ಭಾಷೆಗಳಲ್ಲಿ ಹುಟ್ಟುಕೊಳ್ಳುತ್ತಿದ್ದ ಹೊಸ ಸಾಹಿತ್ಯಗಳಿಗೆ ಮಾದರಿಯೂ ಪ್ರೇರಕ ಶಕ್ತಿಯೂ ಆಯಿತು. ಉದಾಹರಣೆಗೆ, ಇಂಗ್ಲಿಷ್ ಕವಿಶ್ರೇಷ್ಠ ಎಡ್ಮಂಡ್ ಸ್ಪೆನ್ಸರ್‍ನ ಷೆಪರ್ಡ್ಸ್ ಕ್ಯಾಲೆಂಡರ್ ಮತ್ತು ಫೇರಿ ಕ್ವೀನ್ ಕೃತಿಗಳಲ್ಲಿ ಇಟಲಿಯ ಈ ನೂತನ ಕಾವ್ಯ ವಿಧಾನಗಳ ಪ್ರಭಾವವನ್ನು ಕಾಣಬಹುದು. ಭಾರತದಲ್ಲಿ ಪಾಶ್ಚಾತ್ಯ ಸಾಹಿತ್ಯ, ಸಂಸ್ಕøತಿಗಳ ಪ್ರಭಾವದಿಂದ ಉಂಟಾದ ನವೋದಯ ಮೊದ ಮೊದಲು ಬಂಗಾಳದಲ್ಲಿ ಕಾಣಿಸಿಕೊಂಡು ಅನಂತರ ಇತರ ಪ್ರಾಂತ್ಯಗಳಿಗೂ ಬಂದಂತೆ ನವೋದಯ ಮೊದಲು ಇಟಲಿಯಲ್ಲಿ ತಲೆದೋರಿ ಆಮೇಲೆ ಬೇರೆ ಕಡೆಗೆ ಹಬ್ಬಿತು. 
ಹದಿನಾರನೆ ಶತಮಾನದಲ್ಲಿ ಹೀಗೆ ಬೇರೆ ದೇಶಗಳಿಗೆ ಮಾರ್ಗದರ್ಶಿಯಾಗಿದ್ದ ಇಟಲಿ ಮುಂದಿನ ಶತಮಾನದಲ್ಲಿ ಆ ಸ್ಥಾನವನ್ನು ಕಳೆದುಕೊಂಡಿತು. ಸಂಗೀತ, ಚಿತ್ರಕಲೆ, ಶಿಲ್ಪಕಲೆಗಳಲ್ಲಿ ಅದು ತನ್ನ ಹಿಂದಿನ ಹಿರಿಮೆಯನ್ನು ಉಳಿಸಿಕೊಂಡರೂ ಸಾಹಿತ್ಯದಲ್ಲಿ ಹಿಂದುಳಿಯಿತು. ಕಾವ್ಯದಲ್ಲಾಗಲಿ, ಗದ್ಯದಲ್ಲಾಗಲಿ ಹೇಳಬಹುದಾದಂಥ ಕೃತಿಗಳಾವುವೂ ಹದಿನೇಳನೆಯ ಶತಮಾನದಲ್ಲಿ ಬರಲಿಲ್ಲ. ಆ ಶತಮಾನದ ಅತ್ಯಂತ ಗಣನೀಯವಾದ ಕೃತಿಗಳೆಂದರೆ ವೈಚಾರಿಕತೆಯ ಕ್ಷೇತ್ರಕ್ಕೆ ಸೇರಿದ ಗದ್ಯದಲ್ಲಿ ಕಂಡುಬರುವಂಥವು. ಇಂಥ ಗ್ರಂಥಗಳ ಲೇಖಕರಲ್ಲಿ ಖಗೋಳಶಾಸ್ತ್ರಜ್ಞನಾದ ಗೆಲಿಲಿಯೋನ ಹೆಸರು ಲೋಕಪ್ರಸಿದ್ದವಾಗಿದೆ. ನಾಟಕಪ್ರಪಂಚದಲ್ಲಿ ಒಂದು ಕಡೆ ಕ್ಲಾಸಿಕಲ್ ನಾಟಕದ ಅನುಕರಣವೂ ಇನ್ನೊಂದು ಕಡೆ ಕಮೇಡಿಯಾ ಡೆಲ್ ಆರ್ಟಿ ಎಂಬ ಹಾಸ್ಯನಾಟಕಗಳೂ ರಚಿತವಾದವು. ವೃತ್ತಿನಾಟಕಸಂಸ್ಥೆಗಳವರಿಂದ ರೂಪಿತವಾಗುತ್ತಿದ್ದ ಈ ಹಾಸ್ಯನಾಟಕಗಳು ವಿಶೇಷ ಜನಪ್ರಿಯತೆಯನ್ನು ಗಳಿಸಿದವು. ಇಟಾಲಿಯನ್ ನಾಟಕಗಳಲ್ಲಿ ಪ್ರಸಿದ್ಧವಾಗಿರುವ ಪ್ಯಾಂಟಲೊನ್, ಹಾರ್ಲೆಕಿನ್, ಪಂಚ್ ಮೊದಲಾದ ಪಾತ್ರಗಳು ಇವುಗಳಲ್ಲಿ ಮೊದಲಿಗೆ ಕಾಣಿಸಿಕೊಂಡವು. ನಟರು ಸಂದರ್ಭಾನುಸಾರ ತಾವೇ ಹಾಸ್ಯೋಕ್ತಿಗಳನ್ನು ಸೇರಿಸಿ ನಾಟಕಕ್ಕೆ ಕಳೆಕೊಡುತ್ತಿದ್ದುದಲ್ಲದೆ ಅದರ ವಾಸ್ತವಿಕತೆಯನ್ನು ಹೆಚ್ಚಿಸುತ್ತಿದ್ದರು. ಕ್ರಮೇಣ ಈ ಬಗೆಯ ನಾಟಕದ ಪಾತ್ರಗಳು ಒಂದೇ ಮಾದರಿಯ ವ್ಯಕ್ತಿಗಳಾಗಿ ನಾಟಕ ಸ್ವಾರಸ್ಯಕ್ಕೆ ಚ್ಯುತಿ ಬಂದಿತು. ಆದರೆ ಅವು ಆರಂಭವಾದಾಗ ಜನಪ್ರಿಯವಾಗಿದ್ದುದನ್ನು ಅಲ್ಲಗಳೆಯುವಂತಿಲ್ಲ. ಈ ಹಾಸ್ಯನಾಟಕಗಳನ್ನೂ ಸಂಗೀತ ಪ್ರಧಾನವಾದ ಗೀತನಾಟಕಗಳನ್ನೂ ಇಟಲಿಯ ಸಂಚಾರೀ ನಾಟಕ ತಂಡಗಳು ತಮ್ಮ ದೇಶದಲ್ಲಿ ಮಾತ್ರವಲ್ಲದೆ ನೆರೆಹೊರೆಯ ನಾಡುಗಳಲ್ಲೂ ಪ್ರದರ್ಶಿಸಿದವು. 
ಹದಿನೆಂಟನೆ ಶತಮಾನದ ದ್ವಿತೀಯಾರ್ಧದಲ್ಲಿ ಇಟಲಿಯ ಸಾಂಸ್ಕøತಿಕ ಮತ್ತು ರಾಜಕೀಯ ಜೀವನದ ಪುನರುತ್ಥಾನವಾಯಿತು. ಆ ದೇಶದ ರಾಜ್ಯಗಳನೇಕರು ಪಾರತಂತ್ರ್ಯದಿಂದ ಬಿಡುಗಡೆಹೊಂದಿ ಹೊಸಚೈತನ್ಯವನ್ನು ಪಡೆದವು. ಫ್ರಾನ್ಸಿನಲ್ಲಿ ಎನ್‍ಸೈಕ್ಲೊಪೀಡೀ ಎಂಬ ವಿಶ್ವಕೋಶದ ಮೂಲಕ ಹರಡುತ್ತಿದ್ದ ಬಹುಮುಖದ ಜ್ಞಾನಪ್ರಸಾರದ ಫಲ ಇಟಲಿಗೂ ಸಂದಿತು. ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಚಾರಗಳಲ್ಲಿ ಹೊಸದೃಷ್ಟಿ ಬೆಳೆಯಿತು. ಎನ್‍ಸೈಕ್ಲೋಪೀಡೀ ಗ್ರಂಥವೇ ಇಟಾಲಿಯನ್ ಭಾಷೆಗೆ ಪರಿವರ್ತಿತವಾಗಿ ಪ್ರಭಾವ ಬೀರಿತು. ವಿಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲೇ ಮಾನ್ಯತೆ ಪಡೆಯುತ್ತಿದ್ದ ಹೊಸ ಹೊಸ ವಿಷಯಗಳನ್ನೂ ಅನ್ವೇಷಣೆಗಳನ್ನೂ ಫ್ರಾನ್ಸಿಸ್ಕೋ ಆಲ್ಗರೋಟಿ ಮೊದಲಾದವರು ಇಟಾಲಿಯನ್ ಭಾಷೆಯಲ್ಲಿ ವಿವರಿಸಿದರು. ಸಮಾಜ ಸುಧಾರಣೆ, ರಾಜಕೀಯ ಜಾಗೃತಿಯ ಪ್ರಸಾರ, ಸ್ವತಂತ್ರವಾದ ಆಲೋಚನಾಪ್ರಚೋದನೆ ಇತ್ಯಾದಿಯಾದ ಧ್ಯೇಯಗಳನ್ನು ಹೊಂದಿದ್ದ ಪುಸ್ತಕಗಳೂ ಪತ್ರಿಕೆಗಳೂ ಅವತರಿಸಿದವು. ಈ ಹೊಸ ವಿಚಾರಸರಣಿಗೆ ಅನುಗುಣವಾಗಿ ಸಾಹಿತ್ಯದ ಭಾಷಾಶೈಲಿಯೂ ಬದಲಾವಣೆ ಹೊಂದಿತು. ಶಬ್ದಾಡಂಬರ, ಉದ್ದುದ್ದನೆಯ ವಾಕ್ಯಗಳು, ಪ್ರಾಚೀನ ಲೇಖಕರ ಅನುಕರಣೆಯಿಂದ ಉತ್ಪನ್ನವಾಗುತ್ತಿದ್ದ ಕೃತಕತೆ, ಸಂಪ್ರದಾಯಶರಣತೆಯಿಂದ ಬಂದ ಸಂಕುಚಿತ ಮನೋಭಾವ ಇವೆಲ್ಲ ಕ್ರಮೇಣ ಕೊನೆಗೊಂಡು ಸರಳವಾದ ನೇರವಾದ ಅಭಿವ್ಯಕ್ತಿ ಮತ್ತು ಜನಜೀವನದ ನೈಜಚಿತ್ರಣಗಳು ಸಾಹಿತ್ಯದಲ್ಲಿ ಕಾಣಿಸಿಕೊಂಡವು. ಹೊಸ ಬಗೆಯ ಮಾನವೀಯತೆಯೊಂದು ಇಟಲಿಯ ಸಾಹಿತ್ಯದಲ್ಲಿ ತಲೆದೋರಿತು. ಗೊಲ್ಡೋನಿ (1707-1793) ತನ್ನ ನಾಟಕಗಳಲ್ಲಿ ಕಮೇಡಿಯ ಡೆಲ್ ಆರ್ಟಿ ವರ್ಗದ ಹಾಸ್ಯನಾಟಕಗಳಲ್ಲಿ ಎದ್ದು ಕಾಣುತ್ತಿದ್ದ ಕೃತಕತೆಯನ್ನು ಬಿಟ್ಟು ನೈಜತೆಯನ್ನು ಬೆಳೆಸಿದ. ಇನ್ನೊಬ್ಬ ನಾಟಕಕಾರ ಆಲ್‍ಫಿಯೆರಿ, ಕೌಂಟ್ ವಿಟ್ಟೋರಿಯೊ (1749-1803) ಕ್ಲಾಸಿಕಲ್ ಮಾದರಿಯ ನಾಟಕಗಳನ್ನು ಬರೆದ. ಅವನ ಕೃತಿಗಳು ಪ್ರೇಕ್ಷಕರಲ್ಲೂ ವಾಚಕರಲ್ಲೂ ದೇಶಭಕ್ತಿಯನ್ನೂ ಸ್ವತಂತ್ರ ಮನೋಭಾವವನ್ನೂ ಪ್ರಚೋದಿಸಿ ಪ್ರಖ್ಯಾತವಾದವು. ಹದಿನೆಂಟನೆ ಶತಮಾನದ ಇಟಲಿಯ ಕವಿಗಳಲ್ಲಿ ಆತ ಮುಖ್ಯನಾದವ. ಜೀಸ್ಯುಪ್ ಪರಿನಿಯೂ ಇದೇ ರೀತಿ ಇಟಲಿಯ ಜನರಲ್ಲಿ ದೇಶಪ್ರೇಮ ಆತ್ಮಗೌರವಗಳನ್ನೂ ಹೊಡೆದೆಬ್ಬಿಸುವಂಥ ಕಾವ್ಯರಚನೆ ಮಾಡಿದ. ಇಂಥವನೇ ಆದ ಇನ್ನೊಬ್ಬ ಕವಿ ಪೋಸ್ಕೊಲೊ. ಇವರೆಲ್ಲರೂ ಇಟಲಿಯ ರೊಮ್ಯಾಂಟಿಕ್ ಸಾಹಿತ್ಯದ ಬೆಳೆವಣಿಗೆಗೆ ಹಾದಿ ಮಾಡಿಕೊಟ್ಟರು.
ಇಟಲಿಯ ರೊಮ್ಯಾಂಟಿಕ್ ಸಾಹಿತ್ಯ ಜರ್ಮನ್ ಮತ್ತು ಇಂಗ್ಲಿಷ್ ರೊಮ್ಯಾಂಟಿಕ್ ಸಾಹಿತ್ಯಗಳಿಂದ ಪ್ರೇರಣೆ ಪಡೆಯಿತು. ರೊಮ್ಯಾಂಟಿಕ್ ಸಾಹಿತ್ಯದ ಮುಖ್ಯಾಂಶಗಳನೇಕವು ಇಂಗ್ಲೆಂಡ್, ಜರ್ಮನಿಗಳಿಂದ ಇಟಲಿಗೆ ಬಂದವು. ಆದರೆ ಇಂಗ್ಲಿಷ್ ಕವಿಗಳಾದ ವಡ್ರ್ಸ್‍ವರ್ತ್, ಕೊಲ್‍ರಿಜ್, ಬೈರನ್, ಷೆಲ್ಲಿ, ಕೀಟ್ಸ್‍ರಂಥ ಉದ್ದಾಮ ಕವಿಗಳು ಇಟಲಿಯಲ್ಲಿ ಬರಲಿಲ್ಲ. ವಿಪರೀತ ಭಾವೋದ್ರೇಕಕ್ಕೆ ಎಡೆಗೊಡುವ ಲಿಯೊಪರ್ದಿಯನ (1798-18737) ಕಾವ್ಯವೇ ಇಟಲಿಯ ರೊಮ್ಯಾಂಟಿಕ್ ಸಾಹಿತ್ಯದ ಶಿಖರ. ಗದ್ಯಕ್ಷೇತ್ರದಲ್ಲಿ ರೊಮ್ಯಾಂಟಿಕ್ ಪಂಥದ ಅಭಿವ್ಯಕ್ತಿ ಮುಖ್ಯವಾಗಿ ಚಾರಿತ್ರಿಕ ಕಾದಂಬರಿಗಳಲ್ಲಿ ನಡೆಯಿತು. ಈ ವರ್ಗಕ್ಕೆ ಸೇರಿದ ಅಲೆಸ್ಯಾಂಡ್ರೋ ಮ್ಯಾನ್‍ಜೋನಿಯ (1785-1873) ಇಫ್ರಾಮೆನ್ಸಿ ಸ್ಟೋಸಿ ಇಟಾಲಿಯನ್ ಭಾಷೆಯ ಅತ್ಯಂತ ಜನಪ್ರಿಯವಾದ ಕಾದಂಬರಿಯೆಂಬ ಪ್ರಶಂಸೆಗೆ ಪಾತ್ರವಾಗಿದೆ. ಮ್ಯಾನ್ ಜೋನಿ ಇಟಲಿಯ ರೊಮ್ಯಾಂಟಿಕ್ ಸಾಹಿತ್ಯದ ಮುಂದಾಳೆಂದು ಪರಿಗಣಿತನಾಗಿದ್ದಾನೆ. ಅವನ ಇನ್ನಿಸ್ಯಾಕ್ರಿ (ಪವಿತ್ರ ಗೀತಗಳು) ಎಂಬ ಕವನಸಂಗ್ರಹ ವಿಶೇಷ ಮನ್ನಣೆ ಗಳಿಸಿದೆ. ಇವನಲ್ಲದೆ, ಇವನಷ್ಟು ಪ್ರಖ್ಯಾತರಲ್ಲದ ಕವಿಗಳನೇಕರು ವ್ಯಂಗ್ಯ, ವಿಡಂಬನೆ, ಸ್ವಾತಂತ್ರ್ಯಪ್ರಿಯತೆ, ಮೊದಲಾದ ಬಗೆ ಬಗೆಯ ಅಂಶಗಳನ್ನು ಒಳಗೊಂಡ ಕವಿತೆಗಳನ್ನು ಬರೆದರು. ರಾಜಕೀಯ ವಿಚಾರಾತ್ಮಕವಾದ ಗದ್ಯಸಾಹಿತ್ಯವೂ ಶತಮಾನದ ಮಧ್ಯಭಾಗದ ಹೊತ್ತಿಗೆ ಬೇಕಾದಷ್ಟು ಬಂತು. ಜ್ಯೊಸೆಪ್ಟ ಮ್ಯಾಟ್ಜಿನಿ (1803-72) ಈ ವರ್ಗದ ಲೇಖಕರಿಗೆ ಉದಾಹರಣೆಯೆನ್ನಬಹುದು. ನಾರ್ವೆಯ ನಾಟಕಕಾರ ಇಬ್ಸೆನ್ನನ ವಾಸ್ತವಿಕ ನಾಟಕಗಳ ಮಾದರಿಯನ್ನು ಅನುಸರಿಸಿ ಸಮಸ್ಯಾತ್ಮಕ ನಾಟಕಗಳನ್ನೂ ಅನೇಕರು ರಚಿಸಿದರು. ಪಾವಲೂ ಫೆರ್ರಾರಿ, ಜೆಸ್ಯೊಪ್ ಜಿಯಕೋಸ್, ರಾಬರ್ಟ್ ಬ್ರ್ಯಾಕೊ ಮೊದಲಾದವರು ಇಂಥ ನಾಟಕಕಾರರು. ಈ ನಾಟಕಕಾರರು ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಇಟಲಿಯ ಸಾಹಿತ್ಯದಲ್ಲಿ ತಲೆದೋರಿದ ಒಂದು ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತಾರೆ. ರೊಮ್ಯಾಂಟಿಕ್ ಸಾಹಿತ್ಯ (ಇಂಗ್ಲಿಷಿನಲ್ಲಾದಂತೆಯೇ) ಬರುಬರುತ್ತ ಭಾವವೈಪರೀತ್ಯ, ವಿಪರೀತರಾಗೋದ್ರಿಕ್ತತೆ, ವಿಚಾರ ಹೀನತೆ ಮೊದಲಾದ ದೌರ್ಬಲ್ಯಗಳಿಗೆ ಅತಿಯಾಗಿ ಎಡೆಕೊಟ್ಟ ಕಾರಣದಿಂದ ಅದಕ್ಕೆ ವಿರೋಧವಾಗಿ ವಾಸ್ತವಿಕತೆ, ಸಮಕಾಲೀನ ಸಾಮಾಜಿಕ ಸಮಸ್ಯೆಗಳ ಪ್ರತಿಪಾದನೆ, ಮನೋವಿಶ್ಲೇಷಣೆಗಳು ಸಾಹಿತ್ಯಕ್ಕೆ ಬಂದುದನ್ನು ಅವರ ಕೃತಿಗಳಲ್ಲಿ ಕಾಣಬಹುದು. ಕಾವ್ಯ ಕ್ಷೇತ್ರದಲ್ಲಿ ಈ ಪರಿವರ್ತನೆಯನ್ನು ಪ್ರತಿನಿಧಿಸುವವ ಜಿಯೊಸ್ಯೊ ಕಾಡ್ರ್ಯೊಚಿ (1835-1907). ಕಾಡ್ರ್ಯೊಚಿಯ ಕವನಗಳಲ್ಲೂ ಜೋವಾನಿವೆರ್ಗನ ಕಥೆ ಕಾದಂಬರಿಗಳಲ್ಲೂ ನಾವು ಈ ಬದಲಾವಣೆಯನ್ನು ಕಾಣುತ್ತೇವೆ.
ಇಪ್ಪತ್ತನೆ ಶತಮಾನದ ಆದಿಭಾಗದಲ್ಲಿ ಇಟಾಲಿಯನ್ ಸಾಹಿತ್ಯದಲ್ಲಿ ಅತ್ಯಂತ ಗಣ್ಯನಾಗಿದ್ದವ ಗೇಬ್ರಿಯಲ್ ಡಾನಂಜಿಯೊ (1863-1938) ಕಾಡ್ರ್ಯೊಚಿಯ ಅನುಯಾಯಿಯಾಗಿ ಬರೆಯತೊಡಗಿದ ಈತ ಕ್ರಮೇಣ ಕ್ಲಾಸಿಕಲ್ ಪಂಥದ ವೀರಾನುಗಾಮಿಯಾಗಿ ಇತರರ ಮೇಲೆ ತನ್ನ ಪ್ರಭಾವವನ್ನು ಬೀರಿದ. ಇವನ ಬರೆಹಗಳು ಫ್ಯಾಸಿಸ್ಟ್ ಪಂಥದ ತತ್ತ್ವಗಳನ್ನೂ ಒಳಗೊಂಡಿದ್ದವು. ಇವನ ಅತ್ಯಂತ ಪ್ರಭಾವಶಾಲಿ ಕೃತಿಗಳು ರಚಿತವಾದುದು 1885 ರಿಂದ 1910ರವರೆಗೆ. 
ಡಾನಂಜಿಯೋನ ಅನಂತರ ಬಂದ ಇಟಲಿಯ ಸಾಹಿತಿಗಳಲ್ಲಿ ದೇಶ ವಿದೇಶಗಳೆರಡರಲ್ಲೂ ಪ್ರಸಿದ್ಧನಾದವನೆಂದರೆ ನಾಟಕಕಾರ ಲ್ಯೂಗಿ ಪಿರ್ಯಾಂಡೆಲ್ಲೊ (1867-1936). ಈತ ಕಾದಂಬರಿಗಳನ್ನು ಬರೆದು ತನ್ನ ಸಾಹಿತ್ಯಕೃಷಿಯನ್ನು ಆರಂಭಿಸಿದ. ಪಿರ್ಯಾಂಡೆಲ್ಲೊನ ಅನಂತರ ನಾಟಕಕಾರನಾಗಿ ವಿಚಾರಾತ್ಮಕವಾದ ವ್ಯಕ್ತಿತ್ವದ ವಿಶ್ಲೇಷಣೆಯನ್ನು ಗುರಿಯಾಗಿ ಉಳ್ಳ, ವೈಶಿಷ್ಟ್ಯಮಯವಾದ ನಾಟಕಗಳನ್ನು ರಚಿಸಿ ವಿಖ್ಯಾತನಾಗಿ 1934ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದ. ಇವನಲ್ಲದೆ, ಈ ಶತಮಾನದ ಇನ್ನೊಬ್ಬ ಪ್ರಭಾವಶಾಲಿ ಇಟಾಲಿಯನ್ ಬರಹಗಾರನೆಂದರೆ ಬೆನೆಡಿಟೊ ಕ್ರೋಚೆ (1906-1952) ಆಧುನಿಕ ಸೌಂದರ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಗಳ ಕ್ಷೇತ್ರದಲ್ಲಿ ಕ್ರೋಚೆ ದೊಡ್ಡ ಹೆಸರನ್ನು ಗಳಿಸಿದ್ದಾನೆ.
ಬೇರೆ ಸಾಹಿತ್ಯಗಳಿಗೆ ಹೋಲಿಸಿದರೆ ಇಟಾಲಿಯನ್ ಸಾಹಿತ್ಯ ತಡವಾಗಿಯೇ (13ನೇ ಶತಮಾನದಲ್ಲಿ) ಆರಂಭವಾಯಿತೆನ್ನಬೇಕು. ಅದರ ಚರಿತ್ರೆಯಲ್ಲಿ ಕೆಲವು ಯುಗಗಳು ಉತ್ತಮ ಪೈರನ್ನು ಕಂಡರೆ ಇನ್ನು ಕೆಲವು ಬೀಳಾಗಿದ್ದವು. ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳಿಗೂ ಸಾಹಿತ್ಯದಲ್ಲಿ ತಲೆದೋರಿದ ಏರುಪೇರುಗಳಿಗೂ ಒಂದು ರೀತಿಯ ಸಮೀಪಸಂಬಂಧವಿದ್ದುದನ್ನು ಗುರುತಿಸಬಹುದು. ಪ್ರಾಚೀನ ಯೂರೋಪಿನ ಸಂಸ್ಕøತಿಯ ಕೇಂದ್ರವಾಗಿದ್ದ ಇಟಲಿ ಬೇರೆ ಸಂಸ್ಕøತಿಗಳ ಸಂಪರ್ಕವನ್ನು ಪಡೆದಾಗಲೇ ಅದರ ಸಾಹಿತ್ಯ ಉಚ್ಛ್ರಾಯಸ್ಥಿತಿಗೈದಿತು. ಅದರೆ ಹೀಗೆ ರೂಪಿತವಾದ ಇಟಲಿಯ ಸಾಹಿತ್ಯ ಇತರ ಐರೋಪ್ಯ ಸಾಹಿತ್ಯಗಳ ಮೇಲೂ ತನ್ನ ಪ್ರಭಾವವನ್ನು ಬೀರಿತೆಂಬುದು ಇನ್ನೂ ಗಮನಾರ್ಹವಾದ ಅಂಶ. 
(ಎಚ್.ಕೆ.ಆರ್.; ಎಂ.ಆರ್.)
	
ಪ್ರಾರಂಭದ ಇಟಾಲಿಯನ್ ಕವಿಗಳು ಕವನ ರೂಪಗಳನ್ನೂ ವಸ್ತುಗಳನ್ನೂ ಹೊರದೇಶಗಳಿಂದ ತೆಗೆದುಕೊಂಡರು. ಪ್ರಾಚೀನ ವೀರರ, ಅರಸ ಆರ್ಥರನ ಮತ್ತು ಅವನ `ನೈಟ್ಸ್ ಅಥವಾ ಸರದಾರರ ಮತ್ತು ಅರಸ ಚಾರ್ಟೆಮೆನ್ ಮತ್ತು ಅವನ ವೀರರ ಸಾಹಸಗಳು ಇವರ ಕವನಗಳ ವಸ್ತುಗಳು. ಈ ಕವನಗಳು ಜನಪ್ರಿಯವದುದಷ್ಟೇ ಅಲ್ಲ, ಮುಂದಿನ ಕವಿಗಳಿಗೂ ಆದರ್ಶ ವಿರೋಚಿತ ಬದುಕಿನ ವಸ್ತುವನ್ನು ಕೊಟ್ಟವು.
	
ದಾಂತೆ ವಿಶ್ವಕವಿಗಳ ಪಂಕ್ತಿಯಲ್ಲಿ ನಿಲ್ಲುವವನು. ಇವನ ಚಿಂತನೆಯ ಔನ್ನತ್ಯ, ಕಣ್ಣಿಗೆ ಕಟ್ಟುವ ಮತ್ತು ಕಾವ್ಯದ ಸಲಿಲ ಶೈಲಿ ಇವು ವಿಶಿಷ್ಟವಾದವು. ತನ್ನ ಮಹಾನ್ ಕೃತಿಗಳಿಗೆ ಲ್ಯಾಟಿನ್ ಬಳಸದೆ ಇಟಾಲಿಯನ್ ಭಾಷೆಯನ್ನೆ ಬಳಸಿ ಇಟಾಲಿಯನ್ ಸಾಹಿತ್ಯದ ಬುನಾದಿಯನ್ನು ಸ್ಥಾಪಿಸಿದವರಲ್ಲಿ ಇವನು ಒಬ್ಬ. ಮಧ್ಯಯುಗದ ಯುರೋಪಿನ ಆದರ್ಶಗಳ ವ್ಯಾಖ್ಯಾನಕಾರ ಇವನು. ಇವನ ಮಹಾಕಾವ್ಯ, `ದಿ ಡಿವೈನ್ ಕಾಮಿಡಿ'ಯು ನರಕ, ಪ್ರಾಯಶ್ಚಿತ್ತ ಲೋಕ ಮತ್ತು ಸ್ವರ್ಗಗಳ ಸಂದರ್ಶನವನ್ನು ನಿರೂಪಿಸುತ್ತದೆ, ಈ ಅಸಾಧಾರಣ ಪಯಣದಲ್ಲಿ ಮಾರ್ಗದರ್ಶಕರು ದಾಂತೆಯ ಪರಿಶುದ್ಧ ಪ್ರೇಮವನ್ನು ಗೆದ್ದ ಬಯಾಟ್ಟಿಸ್ ಮತ್ತು ಮಹಾಕವಿ ವರ್ಜಿಲ್.
	
ಪ್ರತ್ಯೇಕ ವ್ಯಕ್ತಿತ್ವದಲ್ಲಿ ಆಸಕ್ತಿಯನ್ನು ತೋರಿದ ಪೆಟ್ರಾರ್ಕನನ್ನು `ಆಧುನಿಕ ಮಾನವ ಎಂದು ಕರೆಯುವುದುಂಟು. ಹಾಗೆಯೇ, ತನ್ನ ತಾಯ್ನಾಡು ಇಟಲಿಯನ್ನು ಹಾಡಿ ಹೊಗಳಿದ ಇವನನ್ನು ಇಟಲಿಯ ಮೊದಲನೆಯ ರಾಷ್ಟ್ರನಿಷ್ಠ (ನ್ಯಾಷನಲಿಸ್ಟ್) ಎಂದು ಕರೆಯುತ್ತಾರೆ.
	
ಬೊಕಾಚಿಯೋ ತನ್ನ ಕಥೆಗಳ ಸಾಮಗ್ರಿಯನ್ನು ತನ್ನ ಮುಂದಿದ್ದ ಸಾಹಿತ್ಯ ಕೃತಿಗಳಿಂದ ತೆಗೆದುಕೊಳ್ಳಲಿಲ್ಲ, ನೇರವಾಗಿ ಬದುಕಿನಿಂದ ಆರಿಸಿಕೊಂಡ.
	
ದಾಂತೆ ಮತ್ತು ಬೊಕಾಚಿಯೊ, ಇಡೀ ಯೂರೋಪಿನ್ ಸಾಹಿತ್ಯದ ಮೇಲೆ ಪ್ರಭಾವ ಬೀರಿದ ದೈತ್ಯರು. 
	
ಹದಿನೈದನೆಯ ಶತಮಾನದ ಮಹತ್ವದ ಕವಿಗಳಲ್ಲಿ ಒಬ್ಬ ಆ್ಯಂಜಿಲೊ ಪಾಲಿಜಿ ಆನೊ (ಇವನನ್ನು ಪಾಲಿಷಿಯನ್ ಎಂದೂ ಕರೆಯುವುದುಟು) ಪದ್ಯ ಮಾಧ್ಯಮವನ್ನು ಬಳಸಿ ಇವನು ಬರೆದ `ಆರ್‍ಫಿಯೊ (1480 ?) ಇಟಾಲಿಯನ್ ಭಾಷೆಯಲ್ಲಿ ಮೊದಲನೆಯ ಗಮನಾರ್ಹ ನಾಟಕ.
	
ಮ್ಯಾಕಿಯ ತೆಲಯ `ದಿ ಪ್ರಿನ್ಸ್ (1532) ಇಡೀ ಯೂರೋಪಿನ ಚಿಂತನೆಯ ಮೇಲೆ ಪ್ರಭಾವ ಬೀರಿದ ಕೃತಿ. (ಆದರೆ ಇದರ ಚಿಂತನೆಯನ್ನು ಹಲವೊಮ್ಮೆ ತಪ್ಪಾಗಿ ವ್ಯಾಖ್ಯಾನ ಮಾಡಿರುವುದುಂಟು.) ಇದರ ಚಿಂತನೆಯ ಆಸ್ತಿಭಾರ, "ರಾಜ್ಯವನ್ನು ಸುರಕ್ಷಿತವಾಗಿ ಉಳಿಸುವುದೇ ರಾಜನ ಪರಮ ಕರ್ತವ್ಯ" ಎನ್ನುವ ಅನಿಸಿಕೆ. ಇವನ ಪ್ರಸಿದ್ಧ ನಾಟಕ `ದಿ ಮ್ಯಾನ್‍ಡ್ರೇಕ್ (1524), ಇದು ಮನುಷ್ಯನ ಪ್ರವೃತ್ತಿಗಳ ಬಹು ಕಹಿಯಾದ ವಿಶ್ಲೇಷಣೆ.
	
ನವೋದಯ ಯುಗದ ಮಹಾನ್ ಕಲಾವಿದರೂ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿದರು, ಮೈಕೆಲ್ ಏಂಜೆಲೋನ ಸುನೀತಗಳಲ್ಲಿ ಗಾಢ ಅನುರಾಗವು ಅಭಿವ್ಯಕ್ತಿಯನ್ನು ಪಡೆಯುತ್ತದೆ. ಕಲೆ ಮತ್ತು ವಿಜ್ಞಾನಗಳ್ನನು ಕುರಿತು ಲಿಯನಾರ್ಡೊ ದ ವಿಂಚಿಯ ಬರೆದ ವಿದ್ವತ್ಪ್ರಬಂಧಗಳು ಆಧುನಿಕ ಚಿಂತಕರ ಮೇಲೆಯೂ ಪ್ರಭಾವ ಬೀರಿವೆ. ಚಿತ್ರ ಕಲಾವಿದ ವಾಸ್ತು ಶಿಲ್ಪ ಜಿಯಾರ್ಜಿಯೊ ವಸಾರಿ ಖ್ಯಾತ ಚಿತ್ರ ಕಲಾವಿದರ. ಶಿಲ್ಪಿಗಳ ಮತ್ತು ವಾಸ್ತು ಶಿಲ್ಪಿಗಳ ಜೀವನ ಚರಿತ್ರೆಗಳನ್ನು ಬರೆದ, ಇಂದು ಇವು ಅಮೂಲ್ಯ ಆಕರವಾಗಿವೆ; ಮತಿಯೊ ಬಾಂದೆಲೊ `ಕಿರು ಕಾದಂಬರಿಗಳು (4 ಸಂಪುಟಗಳು, 1554-73) ಎನ್ನುವ ಕೃತಿಯನ್ನು ಪ್ರಕಟಿಸಿದ; ಇಲ್ಲಿನ ಕಥೆಗಳು ಯೂರೋಪಿನ ಹಲವು ಸಾಹಿತ್ಯ ಕೃತಿಗಳಿಗೆ ಸಾಮಗ್ರಿಯನ್ನು ಒದಗಿಸಿವೆ ಪ್ರಾಯಶಃ ಷೇಕ್ಸ್‍ಪಿಯರ್ ತನ್ನ `ರೋಮಿಯೊ ಅಂಡ್ ಜೂಲಿಯೆಟ್ ನಾಟಕದ ಕಥೆಯನ್ನು ಈ ಕೃತಿಯಿಂದ ತೆಗೆದುಕೊಂಡ.
	
16ನೆಯ ಶತಮಾನದಲ್ಲಿ ಸ್ವತಂತ್ರವಾಗಿ, ದಿಟ್ಟವಾಗಿ ಚಿಂತಿಸಬಲ್ಲ ತತ್ವಶಾಸ್ತ್ರಜ್ಞನೊಬ್ಬ ಕಾಣಿಸಿಕೊಂಡ ಜಿಯೊರ್‍ಡಾನೊ ಬ್ರೂನೊ. ಇವನ ಸ್ವತಂತ್ರ ಚಿಂತನೆಗಾಗಿ ಇವನನ್ನು ರೋಮ್ ನಗರದಲ್ಲಿ 1600ರಲ್ಲಿ ಜೀವಂತ ಸುಟ್ಟರು.
	
17ನೆಯ ಶತಮಾನವು ಶ್ರೇಷ್ಠ ಸಾಹಿತ್ಯವನ್ನು ಕಾಣಲಿಲ್ಲ, ಶ್ರೇಷ್ಠ ಕಲೆಯನ್ನು ಕಾಣಲಿಲ್ಲ. ಇದು `ಬರೋಕ್ ಶೈಲಿಯ ಕಾಲ. ಕವಿಯ ಕಲ್ಪನೆಗೆ ನಿಯಂತ್ರಣವಿಲ್ಲದಿದ್ದ ಕಾಲ. ಅಭಿವ್ಯಕ್ತಿಯಲ್ಲಿ ಕೃತಕ, ಢಾಂಬಿಕ ಶೈಲಿ. ಟ್ರ್ಯಾಜೆಡಿಗಳಲ್ಲಿ ಅಸ್ವಸ್ಥ ಭಾವಗಳು. ಈ ಕಾಲದ ಗಣನೀಯ ಕವಿ, ವಿಜ್ಞಾನಿ ಮತ್ತು ತತ್ವಶಾಸ್ತ್ರಜ್ಞ ತೊಮಾಸೊ ಕಂಪನೆಲನ ಬರಹಗಳಲ್ಲಿ ತನ್ನ ಕಾಲದ ಸಾಮಾಜಿಕ ಬದುಕಿನ ವಿಷಯದಲ್ಲಿ ತೀವ್ರ ಅಸಮಾಧಾನ ಕಾಣುತ್ತದೆ. ಸಾಮಾಜಿಕ ಜೀವನವನ್ನು ಉತ್ತಮಗೊಳಿಸಲು ಇವನು ಮಾಡಿದ ಸಲಹೆಗಳು ಇವನನ್ನು ಸೆರೆಮನೆಗೆ ಒಯ್ದವು.
	
18ನೆಯ ಶತಮಾನದ ಪ್ರಾರಂಭದಲ್ಲಿ ಬರೋಕ್ ಶೈಲಿಗೆ ವಿರೋಧ ವ್ಯಕ್ತವಾಯಿತು. `ಆರ್ಕೇಡಿಯ ಎನ್ನುವ ಸಂಸ್ಥೆಯ ಸದಸ್ಯರು ಸಾಹಿತ್ಯದಲ್ಲಿ ಪ್ರಜ್ಞಾಪೂರ್ವಕ ಅಕೃತ್ರಿಮತೆಯನ್ನು ಸರಳತೆಯನ್ನು ಬೆಳೆಸಿಕೊಳ್ಳಬೇಕೆಂದು ವಾದಿಸಿದರು. ಈ ಹೊಸ ದೃಷ್ಟಿಯಿಂದ ಬರೆದವರಲ್ಲಿ ಗಣ್ಯ ಕವಿ (ಇವನು ನಾಟಕಗಳನ್ನು ಬರೆದ) ಪಿವಿತ್ರೊ ಮೆತಸ್ತಾಸಿಯೊ. ಇಟಲಿಯ ಶ್ರೇಷ್ಠ ನಾಟಕಕಾರಲ್ಲಿ ಒಬ್ಬನಾದ ಕಾರ್ಲೊ ಗೊಲೋನಿಯ ವಿನೋದ ನಾಟಕಗಳಲ್ಲಿಯೂ ಈ ಪಂಥದ ಪ್ರಭಾವವಿದೆ. 
	
18ನೆಯ ಶತಮಾನದ ಇಟಲಿಯ ಸಾಹಿತ್ಯದ ಮೇಲ ಫ್ರಾನ್ಸಿನ ಚಿಂತಕ ರೆನೆ ಡೆಕಾರ್ತ್ ಮತ್ತು ಫ್ರಾನ್ಸಿನ `ಎನ್‍ಲೈಟನ್ ಮೆಂಟ್ ಚಳವಳಿಯ ಬರಹಗಾರರ ಪ್ರಭಾವ ಅಧಿಕವಾಗಿತ್ತು. (ಇದರಿಂದಾಗಿ ಫ್ರೆಂಚ್ ಪದಗಳು ತಂಡ ತಂಡವಾಗಿ ಇಟಾಲಿಯನ್ ಭಾಷೆಯಲ್ಲಿ ಸೇರಿಕೊಂಡವು !) ಜೀಸ್ಯಪ್ ಪರಿನಿಯ ಕಾವ್ಯದಲ್ಲಿ ಸಾಮಾಜಿಕ ವಿಡಂಬನೆಯೂ ಪ್ರಖರವಾಗಿದೆ. ಶ್ರೀಮಂತ ವರ್ಗದ ಹುಡುಗಾಟಿಕೆ, ಭೋಗ ಜೀವನ, ಟೊಳ್ಳು ಬದುಕುಗಳನ್ನು ಇವನು ಉಗ್ರವಾಗಿ ಹಾಸ್ಯಮಾಡಿದ.
	
1789ರಲ್ಲಿ ನಡೆದ ಫ್ರಾನ್ಸಿನ ಮಹಾಕ್ರಾಂತಿಯ ಇಟಲಿಯಲ್ಲಿಯೂ ರಾಷ್ಟ್ರ ಪ್ರೇಮಕ್ಕೂ ಸ್ವಾತಂತ್ರ್ಯದ ಹಂಬಲಕ್ಕೂ ಹೊಸ ಚೈತನ್ಯವನ್ನು ತಂದುಕೊಟ್ಟಿತು. 1870ರಲ್ಲಿ ಫ್ರೆಂಚ್ ಸೈನ್ಯಗಳು ಇಟಲಿಯಿಂದ ಸಂಪೂರ್ಣವಾಗಿ ಕಾಲುತೆಗೆದವು. 19ನೆಯ ಶತಮಾನದ ಪ್ರಾರಂಭದಿಂದ 1870ರವರೆಗೆ ಇಟಲಿಯ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಬಯಕೆ ಉಜ್ವಲವಾಗಿ ಕಾಣುತ್ತದೆ. 19ನೆಯ ಶತಮಾನದ ಪ್ರಾರಂಭದ ಸಾಹಿತ್ಯದಲ್ಲಿ ಮೂರು ಎಳೆಗಳನ್ನು ಕಾಣಬಹುದು. ರಾಷ್ಟ್ರಪ್ರೇಮ ಇನ್ನೂ ಉಳಿದಿದ್ದ ಅಭಿಜಾತ ಸಾಹಿತ್ಯ ಮನೋಧರ್ಮ, ಮತ್ತು ಹೊಸ ಬಗೆಯ ರೊಮ್ಯಾಂಟಿಸಿಸಂ. ಫ್ರಾನ್ಸಿನ ಕ್ರಾಂತಿಯ ಪ್ರಭಾವವು ಎನ್‍ಸೆನ್eóÉೂ ಮಾಂಟಿ ಉಗೊ ಫಾಸ್ಕೊಲೊ ಮತ್ತು ಕಾರ್ಲೊ ಪೋರ್ಟರವರ ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ.
	
ಜಿಯಕೋಮೊ ಲಿಯೊಪಾರ್ದಿ ಇಟಲಿಯ ಭಾವಗೀತೆಗಳ ಕವಿಗಳ ಮೊದಲ ಪಂಕ್ತಿಯಲ್ಲಿರುವವನು. ಗ್ರೀಕ್ ಮತ್ತು ಲ್ಯಾಟಿನ್ ಕವನಗಳ ಅನುವಾದವು ಇವನಿಗೆ ಒಂದು ಬಗೆಯ ಶಿಕ್ಷಣವಾಯಿತು. ಪ್ರಾರಂಭದಲ್ಲಿ ದೇಶಭಕ್ತಿಯ ಉತ್ಸಾಹವು ಕಾಣುತ್ತಿತ್ತು. ಅನಂತರ ಗಾಢವಾದ ನಿರಾಸೆ ಮುಸುಕಿತು. ಆತ್ಮ ವಿಮರ್ಶೆ, ಒಂಟಿತನ ಮತ್ತು ಕೈಗೆ ಎಟುಕದಿರುವುದನ್ನು ಎಟುಕಿಸಿಕೊಳ್ಳುವ ಹಂಬಲ ಇವನ ಕಾವ್ಯದ ಲಕ್ಷಣಗಳು.
	
ಮ್ಯಾನ್eóÉೂೀನಿಯ `ಇ ಪ್ರಾತೊಸಿ ಸ್ಟೋಸಿ (ಮದುವೆ ನಿಶ್ಚಿತಳಾದವಳು) ದಬ್ಬಾಳಿಕೆ ಮತ್ತು ವಿಧಿಯ ಕ್ರೌರ್ಯಕ್ಕೆ ತುತ್ತಾಗಿ ಹೋರಾಡುವ ಇಬ್ಬರು ಬಡ ಪ್ರಣಯಗಳ ಕಥೆ. ಇತನ `ಇನಿ ಸೇಕ್ತಿಯಲ್ಲಿ ಧಾರ್ಮಿಕ ಚಿಂತನೆ ಹರಳು ಗಟ್ಟಿದೆ. ಇವನ ನಿರಾಭರಣ ಗದ್ಯ ಸ್ಪಷ್ಟವಾಗಿದೆ, ಪರಿಣಾಮಕಾರಿಯಾಗಿದೆ.
	
ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅಭಿಜಾತ ಸಾಹಿತ್ಯ ಮನೋಧರ್ಮ, ರೊಮ್ಯಾಂಟಿಸಿಸಂ ಎರಡರ ವಿರುದ್ಧವೂ ಬಂಡಾಯ ಮೂಡಿತು. ಭಾವಗೀತಾತ್ಮಕತೆ ಮತ್ತು ಕೃತಕ ಡಾಂಭಿಕ ಭಾಷೆ ಎರಡನ್ನೂ ತಿರಸ್ಕರಿಸಿದ ಈ ಸಾಹಿತಿಗಳು ತಮ್ಮ ಚಳವಳಿಯನ್ನು `ವೆರಿಸ್ಟೊ ಎಂದರೆ `ವಾಸ್ತವತೆ ಎಂದು ಕರೆದರು.
	
ಗೇಬ್ರಿಯಲ್ ಡಾನಂಜಿಯೊ ರೊಮ್ಯಾಂಟಿಸಿಸಂ, ವಾಸ್ತವತೆ ಮತ್ತು ಅಭಿಜಾತ ಸಾಹಿತ್ಯ ಮನೋಧರ್ಮ ಮೂರನ್ನು ನಿರಾಕರಿಸಿ ನವೋದಯ ಯುಗದ `ವಿಶ್ವ ಮಾನತೆ ಆದರ್ಶವನ್ನು ತನ್ನ ಮುಂದಿರಿಸಿಕೊಂಡ ಇಟಲೊ ಸ್ವವೊನ ಕಾದಂಬರಿಗಳಲ್ಲಿ ಮಾನಸಿಕ ಪ್ರೇರಣೆಗಳ ವಿಶ್ಲೇಷಣೆ ಕಾಣುತ್ತದೆ.
	
ಸಮಾಜಶಾಸ್ತ್ರ ದೃಷ್ಟಿಯ ಇತಿಹಾಸಕಾರ ಗುಗ್ಲಿ ಎಲೊ ಫೊರಲೊ ಇವನು ಮುಸೊಲಿನಿಯ ಫ್ಯಾಸಿಸಂ ಅನ್ನು ವಿರೋಧಿಸಿದ. ಆದರೆ ತತ್ವಶಾಸ್ತಜ್ಞ ಜಿಯೊವನಿ ಜಂಟೈಲ್ ಫ್ಯಾಸಿಸಂ ಅನ್ನು ಬೆಂಬಲಿಸಿದ. ಮೆಟಿಲ್ಡ ಸೆರಾಒ ಮನೋ ವಿಶ್ಲೇಷಾತ್ಮಕ ಕಾದಂಬರಿಗಳನ್ನು ಬರೆದಳು. ಗ್ರೇಜಿûಯ ಡೆಲೆಡ್ಡ ಸಾರ್ಡಿನಿಯದ ರೈತರನ್ನು ಕುರಿತು `ನ್ಯಾಚುರಲಿಸ್ಟಿಕ್ ಕಾದಂಬರಿಗಳನ್ನು ಬರೆದಳು. 1926ರಲ್ಲಿ ಇವಳಿಗೆ ನೊಬೆಲ್ ಪ್ರಶಸ್ತಿ ದೊರಕಿತು.
	
ಕ್ರೋಚೆ ಇಟಲಿಯಾಚೆ ಹಲವಾರು ದೇಶಗಳ ಚಿಂತಕರ ಮೇಲೆ ಪ್ರಭಾವ ಬೀರಿದ. `ಲ ಕ್ರಿಟಿಕ ಎನ್ನುವ ಅವನ ಸಾಹಿತ್ಯಕ ಪತ್ರಿಕೆ. ಅವನ ವಿಚಾರಧಾರೆಯನ್ನು ಹರಡಿತು. ಬುದ್ಧಿಜೀವಿಯು ಸಾರ್ವಜನಿಕ ಜೀವನದಲ್ಲಿ ಭಾಗವಹಿಸಬೇಕು ಎಂದು ಇವನ ನಿಲುವು ಇವನು ಫ್ಯಾಸಿಸಂನ ವಿರೋಧಿ.
	
ಪಿರ್ಯಾಂಡೆಲೊ ತನ್ನ ನಾಟಕಗಳಲ್ಲಿ ಮಾನಸಿಕ ಸ್ಥಿತಿಗಳ ಸೂಕ್ಷ್ಮ ವಿಶ್ಲೇಷಣೆಯನ್ನು ಮಾಡಿದ. ರಂಗ ಮಂದಿರದಲ್ಲಿ ಇವನು ಮಾಡಿದ ಪ್ರಯೋಗಗಳು ನಟರನ್ನು ಪ್ರೇಕ್ಷಕರನ್ನು ಹತ್ತಿರಕ್ಕೆ ತಂದವು. ತತ್ವಜ್ಞಾನದ ಸಮಸ್ಯೆಗಳನ್ನು ಇವನು ತನ್ನ ಕೃತಿಗಳಲ್ಲಿ ಪೃಥಕ್ಕರಿಸಿದ.
	
ಮುಸೊಲನಿಯ ಫ್ಯಾಸಿಸಂ ಸಾಹಿತ್ಯದ ಕುತ್ತಿಗೆ ಹಿಸುಕುವ ಶಕ್ತಿಯಾಯಿತು. ಗೈಸೆಪ ಆಂಟೊನಿಯೊ ಬರ್ಜೀಸ್‍ನಂಥ ಬರಹಗಾರರು ಈ ಸಿದ್ಧಾಂತವನ್ನು ತಿರಸ್ಕರಿಸಿದರು. ಮೊದಲು ಫ್ಯಾಸಿಸಂ ಅನ್ನು ಬೆಂಬಲಿಸಿದ ಕರ್ಸಿಯೊ ಸಕರ್ಟ್ ಅನಂತರ ತನ್ನ `ಕಾಪಟ್ ಎನ್ನುವ ಕೃತಿಯಲ್ಲಿ ಫ್ಯಾಸಿಸಂನಿಂದ ಯೂರೋಪಿನಲ್ಲಿ ಆದ ನೈತಿಕ ಮತ್ತು ಸಾಂಸ್ಕøತಿಕ ಅವನತಿಯನ್ನು ಚಿತ್ರಿಸಿದ.
	
ಗೈಸೆಪೆ ಅಂಗದೆಟಿ ಯೂರೋಪಿನ ಶ್ರೇಷ್ಠ ಕವಿಗಳಲ್ಲಿ ಒಬ್ಬ. ಇವನ `ದ ಬರೀಡ್ ಹಾರ್ಬರ್ (1916) ಕವನ ಸಂಗ್ರಹವು ಇಟಾಲಿಯನ್ ಕಾವ್ಯಕ್ಕೆ ಪುನಶ್ಚೇತನ ಬಂದುದನ್ನು ಸಾರಿತು. ಯುಜಿನಿಯೊ ಮಂಟಾಲೆಯೂ ಯೂರೊಪಿನ ಶ್ರೇಷ್ಠ ಕವಿಗಳಲ್ಲಿ ಒಬ್ಬ ಇವನಿಗೆ 1975ರಲ್ಲಿ ನೊಬೆಲ್ ಪಾರಿತೋಷಕ ಲಭ್ಯವಾಯಿತು. ಬದುಕನ್ನು ಕಟುವಾಗಿ ಟೀಕಿಸುವ ಇವನ ಕಾವ್ಯದಲ್ಲಿ ಗಾಢವಾದ ನಿರಾಸೆಯು ಆಗಾಗ ವ್ಯಕ್ತವಾಗುತ್ತದೆ. ಆಧುನಿಕ ಬದುಕಿನ ದುರಂತವನ್ನು ಎತ್ತಿ ತೋರಿಸುವ ಮತ್ತೊಬ್ಬ ಕವಿ ಸಾಲ್ವಟೋರ್ ಕ್ಯುಸಿಮೊಡೊ. ಆಧುನಿಕ ಬದುಕಿನ ಟ್ರ್ಯಾಜೆಡಿಯನ್ನು ಗಾಢವಾದ ಭಾವಗೀತಾತ್ಮಕತೆಯಲ್ಲಿ ವ್ಯಕ್ತ ಪಡಿಸುತ್ತಾನೆ ಇವನು. 1959ರಲ್ಲಿ ಇವನಿಗೆ ನೊಬೆಲ್ ಪ್ರಶಸ್ತಿ ಲಭ್ಯವಾಯಿತು.
	
ಎರಡನೆಯ ಮಹಾಯುದ್ಧದ ನಂತರ ಇಟಲಿಯಲ್ಲಿ ಕಥಾ ಸಾಹಿತ್ಯದಲ್ಲಿಯೂ ಚಲನಚಿತ್ರದಲ್ಲಿಯೂ ಒಂದು ಹೊಸ ವಾಸ್ತವತೆಯು ಮೂಡಿತು. ಕಾರ್ಲೊ ಲೆವಿ ತನ್ನ ಕಾದಂಬರಿಗಳಲ್ಲಿ ರೈತರ ಕಷ್ಟಗಳನ್ನು ನಿರೂಪಿಸಿದ, ಎಲಿಯೊ ವಿಟ್ಟೊರಿಸಿ, ವಾಸ್ಕೊ ಪ್ರಟೊಲಿನಿ, ಸಿಸರ್ ಪವೀಸ್ ಮೊದಲಾದವರು ಈ ಪಂಥದ ಕೆಲವರು ಗಣ್ಯ ಕಾದಂಬರಿಕಾರರು.
	
ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಮತ್ತೊಬ್ಬ ಕಾದಂಬರಿಕಾರ ಆಟ್‍ಬರ್ಟೊ ಮೊಡೇವಿಲಿಮ ಇಂದಿನ ಸಮಾಜದಲ್ಲಿ ನೈತಿಕ ಸಂದಿಗ್ಧತೆಯಲ್ಲಿ ಸಿಲುಕಿದವರ ಪರಿಸ್ಥಿತಿಯನ್ನು ಇವನು ವಿಶ್ಲೇಷಿಸುತ್ತಾನೆ. ಇವನ ಲ ಸಿಯೊಸಿಅರ (ಇಬ್ಬರು ಸ್ತ್ರೀಯರು, 1959) ಯುದ್ಧದಿಂದ ಜರ್ಝರಿತವಾದ ಇಟಲಿಯಲ್ಲಿ ಇಬ್ಬರು ಮಹಿಳೆಯರ ಬವಣೆಗಳ ಕಥೆಯನ್ನು ಹೇಳುತ್ತದೆ. ಇದು ಒಳ್ಳೆಯ ಚಲನಚಿತ್ರವೂ ಆಯಿತು. ಜಿಯಾರ್‍ಜಿಒನ `ಫಿನ್ಜಿ - ಕಾಂಟಿನಿಸ್ (1965) ಫ್ಯಾಸಿಸ್ಟ್ ಇಟಲಿಯಲ್ಲಿ ಒಂದು ಯೆಹೂದ್ಯ ಕುಟುಂಬದ ಯಾತನೆಯ ಕಥೆ.
	
ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಇತರ ಗಣನೀಯ ಕಾದಂಬರಿಕಾರರಲ್ಲಿ ಕೆಲವರು ದಿನೊ ಬುeóÁಟಿ, ಎಲ್ಸಿ ಮೊರಾಂಟಿ, ನಟಾಲಿಯ ಗಿನ್ಜ್‍ಬರ್ಗ್, ಪ್ರಿಮೊ ಲೆವಿ ಮೊದಲಾದವರು. ಆ ಶತಮಾನದ ಕಡೆಯ ವರ್ಷಗಳಲ್ಲಿ ಪ್ರೊ. ಉಂಬರ್ಟೊ ಎಕೊ, ಫ್ಯಾಂಟಿಸಿ ಮತ್ತು ಆಧ್ಯಾತ್ಮಿಕ ಊಹೆಗಳನ್ನು ಸಂಗಮಗೊಳಿಸಿದ ಕಾದಂಬರಿಗಳಿಂದ ಗಮನ ಸೆಳೆದ. ಆಂಟೊನಿಯೊ ಟಬುಚಿ, ರಾಜಕೀಯ ಮತ್ತು ಸಾಮಾಜಿಕ ಪ್ರಶ್ನೆಗಳನ್ನು ಎತ್ತುವ ಪತ್ತೇದಾರಿ ಕಾದಂಬರಿಗಳನ್ನು ಬರೆದ.
									
(ಪರಿಷ್ಕರಣೆ: ಪ್ರೊ.ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ